ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹಲವು ರಹಸ್ಯಗಳು ಒಂದೊಂದೇ ಬಯಲಾಗುತ್ತಿವೆ. ಇದೀಗ ರೇಣುಕಾ ಸ್ವಾಮಿ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿ ಶವ ಬಿಸಾಡಲು ಬಳಕೆಯಾಗಿದೆ ಎನ್ನಲಾಗುತ್ತಿರುವ 2 ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಹಾಗೂ ಜೀಪ್ ರ್ವಾಂಗ್ಲರ್ ಕಾರು, ರೇಣುಕಾಸ್ವಾಮಿಯನ್ನು ಕೂಡಿ ಹಾಕಿದ್ದ ಬೆಂಗಳೂರಿನ ರಾಜರಾಜೇಶ್ವರಿನಗರದ ಶೆಡ್ಗೆ ಹೋಗುತ್ತಿರುವುದು ಬಹಿರಂಗವಾಗಿದೆ. ಇದೀಗ ಪೊಲೀಸರು ಈ 2 ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರಿನಲ್ಲಿದ್ದ ಕೆಲವು ವಸ್ತುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ವಾಹನಗಳಿಂದ ಒಂದು ತುಂಬಿದ ಮದ್ಯದ ಬಾಟಲಿ ಹಾಗೂ ಮಹಿಳೆಯರು ಬಳಸುವ ವ್ಯಾನಿಟಿ ಬ್ಯಾಗ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ವ್ಯಾನಿಟಿ ಬ್ಯಾಗು ಪವಿತ್ರಾ ಗೌಡ ಅವರಿಗ್ಗೆ ಸೇರಿದ್ದು ಎನ್ನಲಾಗುತ್ತಿದೆ. ಜೀಪ್ ಕಾರು ದರ್ಶನ್ ಆಪ್ತ ವಿನಯ್ ಹೆಸರಿನಲ್ಲಿ ನೊಂದಾವಣಿ ಆಗಿದೆ, ಬೆಂಗಳೂರಿನಲ್ಲಿ ಓಡಾಡಲು ನಟ ದರ್ಶನ್ ಇದೇ ಕಾರನ್ನು ಹೆಚ್ಚಾಗಿ ಬಳಸುತ್ತಿದ್ದರು. ಕೊಲೆಯಾದ ರಾತ್ರಿ ಇದೇ ಕಾರಿನಲ್ಲಿ ರಾಜರಾಜೇಶ್ವರಿನಗರದ ಶೆಡ್ಗೆ ಆಗಮಿಸಿದ್ದರು ಎನ್ನಲಾಗುತ್ತಿದೆ. ಈ ಕಾರಿನಿಂದ ಒಂದು ಮದ್ಯದ ಬಾಟಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನು ಸ್ಕಾರ್ಪಿಯೋ ಕಾರು ದರ್ಶನ್ರ ಮತ್ತೊಬ್ಬ ಆಪ್ತ ಪ್ರದೋಶ್ ಹೆಸರಿನಲ್ಲಿ ನೊಂದಾವಣಿ ಆಗಿದೆ. ಈ ಕಾರು ಸೆಕೆಂಡ್ಸ್ ಆಗಿದ್ದು, ಮೊದಲ ಮಾಲೀಕನಿಂದ ಪ್ರದೋಶ್ ಖರೀದಿಸಿದ್ದಾರೆ ಎನ್ನುತ್ತಿವೆ ಆರ್.ಟಿ.ಓ ದಾಖಲೆಗಳು. ಮೂಲಗಳ ಪ್ರಕಾರ ಇದೇ ಸ್ಕಾರ್ಪಿಯೋ ಕಾರಿನಲ್ಲಿ ಆರೋಪಿಗಳು ರೇಣುಕಾಸ್ವಾಮಿಯ ಶವವನ್ನು ಕೊಂಡೊಯ್ದು ಸುಮನಹಳ್ಳಿ ಮೋರಿಗೆ ಎಸೆದಿದ್ದರು ಎನ್ನಲಾಗುತ್ತಿದೆ. ಇದೀಗ ಸ್ಕಾರ್ಪಿಯೋ ಕಾರಿನಿಂದ ವ್ಯಾನಿಟಿ ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ. ಜೀಪ್ ಹಾಗೂ ಸ್ಪಾರ್ಪಿಯೋದ ಮಾಲೀಕರಾದ ವಿನಯ್ ಹಾಗೂ ಪ್ರದೋಶ್ ಇಬ್ಬರೂ ಸಹ ಈಗ ಪೊಲೀಸರ ವಶದಲ್ಲಿಯೇ ಇದ್ದಾರೆ.
ಎರಡೂ ಕಾರುಗಳು ಸದ್ಯ ಪಶ್ಚಿಮ ವಿಭಾಗದ ಡಿಸಿಪಿ ಕಚೇರಿ ಬಳಿ ಇವೆ. ಬೆರಳಚ್ಚು ತಜ್ಞರು ಕಾರಿನಲ್ಲಿ ಬೆರಳಚ್ಚುಗಳ ಪ್ರತಿಯನ್ನು ತೆಗೆದುಕೊಳ್ಳಲಿದ್ದಾರೆ. ಶವವನ್ನು ಸಹ ಸಾಗಾಟ ಮಾಡಿರುವ ಕಾರಣ ಇನ್ನೂ ಕೆಲವು ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಲಿದ್ದಾರೆ.
ರೇಣುಕಾ ಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು 17 ಮಂದಿಯನ್ನು ಬಂಧಿಸಿದ್ದಾರೆ. ಅವರ ಮೊಬೈಲ್ಗಳನ್ನು ಈಗಾಗಲೇ ವಶಕ್ಕೆ ಪಡೆದಿದ್ದು ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದರ ನಡುವೆ ಕಾರುಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಇನ್ನು ವಿನಯ್ಗೆ ಸೇರಿದ ಸ್ಟೋನಿ ಬ್ರೂಕ್ಸ್ ಹೋಟೆಲ್ನಲ್ಲಿಯೂ ಸಹ ಪೊಲೀಸರು ತನಿಖೆ ನಡೆಸಿ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

