ಬೆಂಗಳೂರು: ತಮ್ಮ ಪತ್ನಿ ಗೂಂಡಾಗಳನ್ನು ಕರೆಸಿ ಹಲ್ಲೆ ನಡೆಸಿದ್ದು, ಕೊಲ್ಲುವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಟ ಧನುಷ್ ರಾಜ್ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿವಾಜಿ ಸುರತ್ಕಲ್ ಚಲನಚಿತ್ರವೂ ಸೇರಿದಂತೆ ಅನೇಕ ಚಿತ್ರಗಳೂ ಹಾಗೂ ಧಾರವಾಹಿಗಳಲ್ಲಿ ನಟಿಸಿರುವ ಧನುಷ್, ತಮ್ಮ ಪತ್ನಿ ವಿರುದ್ಧ ಹಲ್ಲೆ ಹಾಗೂ ಕೊಲೆ ಬೆದರಿಕೆ ಆರೋಪ ಹೊರಿಸಿದ್ದಾರೆ.
ಗಿರಿನಗರದಲ್ಲಿ ದಂಪತಿ ವಾಸವಾಗಿದ್ದು, ಧನುಷ್ ವಿದೇಶ ಪ್ರಯಾಣ ಹೋಗಿದ್ದರು. ವ್ಯವಹಾರದ ಕಾರಣಕ್ಕೆ ವಿದೇಶ ಪ್ರಯಾಣಕ್ಕೆ ಹೋಗಿದ್ದರೂ, ಬೇರೆ ಯಾರೋ ಜತೆಗೆ ವಿದೇಶ ಪ್ರಯಾಣಕ್ಕೆ ಹೋಗಿದ್ದೀಯಾ ಎಂದು ಅನುಮಾನಗೊಂಡು ಪತ್ನಿ ಹರ್ಷಿತಾ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬುದು ಧನುಷ್ ಆರೋಪವಾಗಿದೆ.
ಗಿರಿನಗರದ ಮನೆಯಲ್ಲಿ ಹಲ್ಲೆ ನಡೆಸಿದ್ದು, ಗೂಂಡಾಗಳನ್ನು ಕರೆಯಿಸಿ ಥಳಿಸಿದ್ದಾಳೆ. ಜತೆಗೆ, ಅವರೆಲ್ಲರೂ ಸೇರಿ ನನ್ನನ್ನು ಕೊಲ್ಲುವ ಬೆದರಿಕೆ ಹಾಕಿದ್ದಾರೆ ಎಂದು ಧನುಷ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

