ಕಿಂಗ್ ಸ್ಟನ್: ಟಿ- 20 ವಿಶ್ವಕಪ್ ನ ಸೂಪರ್ 8 ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಫ್ಘಾನಿಸ್ತಾನ ಭರ್ಜರಿ ಗೆಲುವಿನ ಮೂಲಕ ಇತಿಹಾಸ ಸೃಷ್ಟಿಸಿದೆ.
ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ತಂಡ ಮೊದಲ ವಿಕೆಟ್ ಗೆ 118 ರನ್ ಗಳ ಭರ್ಜರಿ ಆರಂಭ ಪಡೆಯಿತು. ಗುರ್ಬಾಜ್ ಮತ್ತು ಇಬ್ರಾಹಿಂ ಜರ್ದಾನ್ ಅರ್ಧಶತಕ ಸಿಡಿಸಿದರು. ಗುರ್ಬಾಜ್ 60 ರನ್ ಗಳಿಸಿದರೆ, ಜರ್ದಾನ್ 51 ರನ್ ಗಳಿಸಿದರು.
ಇಪ್ಪತ್ತು ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿದ ಆಫ್ಘಾನಿಸ್ತಾನ ತಂಡ ಉತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಆಸ್ಟ್ರೇಲಿಯಾ ವನ್ನು ಕಟ್ಟಿಹಾಕಿತು. 127 ರನ್ ಗಳಿಗೆ ಆಲೌಟ್ ಮಾಡುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿತು.
ಗ್ಲೇನ್ ಮ್ಯಾಕ್ಸ್ ವೆಲ್ 59 ರನ್ ಗಳಿಸಿದ್ದು ಬಿಟ್ಟರೆ, ಉಳಿದ ಯಾವುದೇ ಬ್ಯಾಟ್ಸ್ಮನ್ ಕೂಡ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಗುಲ್ಬದ್ದೀನ್ ನೈಬ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ನವೀನ್ ಉಲ್ ಹಕ್ ಮೂರು ವಿಕೆಟ್ ಪಡೆದು ಗೆಲುವಿಗೆ ಕೊಡುಗೆ ನೀಡಿದರು.
ದೊಡ್ಡ ದೊಡ್ಡ ತಂಡಗಳನ್ನು ಸೋಲಿಸುತ್ತಲೇ ಬಂದಿರುವ ಆಫ್ಘಾನಿಸ್ತಾನ ತಂಡ ಈ ಆವೃತ್ತಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಲೀಗ್ ಹಂತದಲ್ಲಿ ಸೋಲಿಸಿತ್ತು. ಈಗ ಸೂಪರ್ ಎಂಟರ ಹಂತದಲ್ಲಿ ಆಸ್ಟ್ರೇಲಿಯಾದಂತಹ ಬಲಿಷ್ಟ, ತಂಡವನ್ನು ಸೋಲಿಸಿ ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಂಡಿದೆ.
ಆಸ್ಟ್ರೇಲಿಯಾ ಮುಂದಿನ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದ್ದು, ಆ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಆಫ್ಘಾನಿಸ್ತಾನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಬಾಂಗ್ಲಾದೇಶ ವಿರುದ್ಧ ಗೆದ್ದರೆ, ಆಫ್ಘಾನಿಸ್ತಾನ ಹಾದಿ ಬಹುತೇಕ ಸುಲಭವಾಗಲಿದೆ. ಇದೊಂದು ಐತಿಹಾಸಿಕ ಕ್ಷಣವಾಗುವ ಸಾಧ್ಯತೆಯಿದೆ.
