ರಾಜಕೀಯ ಸುದ್ದಿ

25 ವರ್ಷದ ನಂತರ ಕಾಂಗ್ರೆಸ್ ಪಾಲಿಗೆ ಸಿಂ”ಹಾಸನ”

Share It

ಹಾಸನ: ಹಾಸನದಲ್ಲಿ ಲೈಂಗಿಕ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಸೋಲು ಕಂಡಿದ್ದು, ಕಾಂಗ್ರೆಸ್‌ನ ಶ್ರೇಯಸ್ ಪಟೇಲ್‌ಗೆ ಭರ್ಜರಿ ಗೆಲುವು ಲಭಿಸಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ 1999 ರಲ್ಲಿ ಪುಟ್ಟಸ್ವಾಮಿಗೌಡ ವಿರುದ್ಧ ಸೋತ ನಂತರದ ಎಲ್ಲ ಚುನಾವಣೆಗಳಲ್ಲಿ ಜೆಡಿಎಸ್ ಇಲ್ಲಿ ಗೆಲುವು ಸಾಧಿಸಿತ್ತು. 2004, 2009 , 2014 ರಲ್ಲಿ ದೇವೇಗೌಡರು ಗೆಲುವು ಸಾಧಿಸಿದ್ದರು. ನಂತರ 2019 ರಲ್ಲಿ ಪ್ರೆಜ್ವಲ್ ರೇವಣ್ಣ ಅವರು ಗೆಲುವು ಸಾಧಿಸಿದ್ದರು.

ಇದೀಗ ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಅವರು, ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸುವ ಮೂಲಕ 25 ವರ್ಷದ ನಂತರ ಕಾಂಗ್ರೆಸ್‌ಗೆ ಮೊದಲ ಗೆಲುವು ಸಂಪಾದಿಸಿದ್ದಾರೆ. ಶ್ರೇಯಸ್ ಪಟೇಲ್, 43,588 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

1989 ರಲ್ಲಿ ಮತ್ತು 1999 ರಲ್ಲಿ ಪುಟ್ಟಸ್ವಾಮಿಗೌಡ, ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿದ್ದರೆ, ಈಗ ಮೊಮ್ಮಗ 32 ವರ್ಷದ ಶ್ರೇಯಸ್ ಪಟೇಲ್, ದೇವೇಗೌಡರ ಮೊಮ್ಮಗ ಪ್ರಜ್ವಲ್ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿಯೂ ಶ್ರೇಯಸ್ ಕೇವಲ 1600 ಮತಗಳ ಅಂತರದಿಂದ ರೇವಣ್ಣ ವಿರುದ್ಧ ಸೋತಿದ್ದರು. ಅವರ ತಾಯಿ 3 ಚುನಾವಣೆಯಲ್ಲಿ ಸ್ಪರ್ಧೆ ಮಾಡಿ, ಸೋಲುಂಡಿದ್ದರು.

ಪ್ರಜ್ವಲ್ ಸೋಲಿಗೆ ಪೆನ್ ಡ್ರೈವ್ ಪ್ರಕರಣ ಕಾರಣ ಎಂದು ಹೇಳುತ್ತಿದ್ದರೂ, ಶ್ರೇಯಸ್ ಪಟೇಲ್, ಟಿಕೆಟ್ ಸಿಕ್ಕ ದಿನದಿಂದ ಕಾರ್ಯಕರ್ತರು, ನಾಯಕರು ಮತ್ತು ಯುವ ಮತದಾರರ ಮನಸೆಳೆಯುವ ಪ್ರಯತ್ನ ನಡೆಸಿದ್ದರು. ಸೀದಾಸಾದಾ ವ್ಯಕ್ತಿತ್ವದ ಶ್ರೇಯಸ್, ಪ್ರಜ್ವಲ್‌ಗಿಂತ ಉತ್ತಮ ಆಯ್ಕೆ ಎಂಬ ನಿರ್ಧಾರಕ್ಕೆ ಮತದಾರ ಬಂದ ಪರಿಣಾಮದಿಂದ ಶ್ರೇಯಸ್ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ನ ಬಹುದಿನದ ಕನಸನ್ನು ನನಸಾಗಿಸಿದ್ದಾರೆ.

ಕೋಟ್ :

ಗೆಲುವು ಸಾಧಿಸಿರುವುದು ನಮಗೆ ಸಂತಸ ತಂದಿದೆ. ಜೆಡಿಎಸ್ ಕುಟುಂಬದ ದರ್ಪ ಅವರಿಗೆ ಸೋಲನ್ನುಂಟು ಮಾಡಿದೆ. ಹಿರಿಯರಿಗೆ ಗೌರವ ಕೊಡದೆ ನಡೆದುಕೊಳ್ಳುತ್ತಿದ್ದ ಅವರ ನಡತೆಯೇ ಅವರಿಗೆ ಸೋಲು ತಂದಿದೆ. ಪುಟ್ಟಸ್ವಾಮಿಗೌಡರ ಕೆಲಸ ಮತ್ತು ಅವರ ಮೊಮ್ಮಗನ ಸರಳತೆ, ಸರಕಾರದ ಗ್ಯಾರಂಟಿಗಳು ಕೆಲಸ ಮಾಡಿವೆ. ಹೀಗಾಗಿ, ನಮಗೆ ಗೆಲುವು ಸಿಕ್ಕಿದೆ ಎನ್ನಬಹುದು.

  • ಎಂ.ಆರ್.ವೆಂಕಟೇಶ್, ಬೇಲೂರು ಕಾಂಗ್ರೆಸ್ ಮುಖಂಡರು ಹಾಗೂ
  • ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷರು

Share It

You cannot copy content of this page