ಸರ್ಕಾರಿ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಪುನರಾರಂಭಿಸಿದ ‘ಅಕ್ಷಯ ಪಾತ್ರ’

uta
Share It

ಬೆಂಗಳೂರಿನ ೧,೨೭೨ ಸರ್ಕಾರಿ ಮತ್ತುಸರ್ಕಾರಿ ಅನುದಾನಿತ ಶಾಲೆಗಳ ೧೨೦,೦೦೦ಕ್ಕೂ ಹೆಚ್ಚು ಮಕ್ಕಳಿಗೆ ಮಧ್ಯಾಹ್ನದ ಪೌಷ್ಟಿಕ ಊಟದ ವ್ಯವಸ್ಥೆ ಪುನರಾರಂಭ

ಬೆಂಗಳೂರು; ಕರ್ನಾಟಕಾದ್ಯಂತ ಇರುವ ಶಾಲೆಗಳು 2024-25ರ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತಿರುವ ಈ ಹೊತ್ತಿನಲ್ಲಿ ಅಕ್ಷಯ ಪಾತ್ರ ಫೌಂಡೇಶನ್ ಪ್ರಧಾನಮಂತ್ರಿ ಪೋಷಣ್ ಅಭಿಯಾನದ ಅಡಿಯಲ್ಲಿ ಬೆಂಗಳೂರಿನಲ್ಲಿ ಮಧ್ಯಾಹ್ನದ ಊಟದ ಸೇವೆ ಪುನರಾರಂಭಿಸುತ್ತಿರುವುದಾಗಿ ಘೋಷಿಸಿದೆ.

ಇಂದಿನಿಂದ 1272 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ 1,20,000ಕ್ಕೂ ಹೆಚ್ಚು ಮಕ್ಕಳು ರಾಜಾಜಿನಗರ, ವಸಂತಪುರ, ಗುಣಿಅಗ್ರಹಾರ ಮತ್ತು ಜಿಗಣಿಯ ನಾಲ್ಕು ಕೇಂದ್ರೀಕೃತ ಅಡುಗೆಮನೆಗಳಲ್ಲಿ ತಯಾರಿಸಿದ ಪೌಷ್ಟಿಕ ಊಟದ ಪ್ರಯೋಜನ ಪಡೆಯಲಿದ್ದಾರೆ.

ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳು ಮತ್ತು ಸ್ಥಳೀಯ ಸರ್ಕಾರದ ಮಾರ್ಗಸೂಚಿಗಳು ಬದ್ಧವಾಗಿ ಇಂದಿನ ಪೌಷ್ಟಿಕ ಊಟದ ಮೆನುವಿನಲ್ಲಿ ಬಿಸಿಬೇಳೆಬಾತ್, ಕರಿದ ಅವಲಕ್ಕಿ/ಕಾರ್ನ್‌ಫ್ಲೇಕ್ಸ್ ಮತ್ತು ರುಚಿಕರವಾದ ಸೇಮಿಗೆ (ಶಾವಿಗೆ) ಪಾಯಸ ಸಿದ್ಧಗೊಳಿಸಲಾಗಿತ್ತು. ಬಿಸಿಬೇಳೆಬಾತ್ ಖಾದ್ಯವು ಮಿಶ್ರ ತರಕಾರಿಗಳು ಮತ್ತು ತುಪ್ಪದಿಂದ ಸಮೃದ್ಧವಾಗಿದ್ದು, ಅಗತ್ಯ ಪೋಷಕಾಂಶಗಳನ್ನು ಪೂರೈಸುವಂತೆ ಸಿದ್ಧಗೊಳಿಸಲಾಗಿತ್ತು. ರುಚಿಕರವಾದ ಸಿಹಿಯಾದ ಶ್ಯಾವಿಗೆ ಪಾಯಸವು ಶಕ್ತಿಯನ್ನೂ ಮತ್ತು ಖುಷಿಯನ್ನೂ ಒದಗಿಸುವಂತಿತ್ತು.

ಈ ಕುರಿತು ಅಕ್ಷಯ ಪಾತ್ರ ಫೌಂಡೇಶನ್‌ನ ಸಿಇಓ ಶ್ರೀಧರ್ ವೆಂಕಟ್, “ಬೆಂಗಳೂರಿನಲ್ಲಿ ಸಾವಿರಾರು ಮಕ್ಕಳ ಆರೋಗ್ಯ ಮತ್ತು ಶೈಕ್ಷಣಿಕ ಪ್ರಯಾಣವನ್ನು ಬೆಂಬಲಿಸುವ ಸಲುವಾಗಿ ನಮ್ಮ ಮಧ್ಯಾಹ್ನದ ಊಟದ ಸೇವೆಗಳನ್ನು ಪುನರಾರಂಭಿಸಲು ಸಂತೋಷ ಪಡುತ್ತೇವೆ. ಏಕಾಗ್ರತೆ ಉಂಟಾಗಬೇಕಾದರೆ ಹೊಟ್ಟೆ ತುಂಬುವುದು ತುಂಬಾ ಅಗತ್ಯ ಎಂಬುದನ್ನು ನಾವು ಅಕ್ಷಯ ಪಾತ್ರದಲ್ಲಿ ನಂಬಿದ್ದೇವೆ. ಅದಕ್ಕಾಗಿಯೇ ನಾವು ಊಟವನ್ನು ಪೌಷ್ಠಿಕಾಂಶಯುಕ್ತವಾಗಿ ಮತ್ತು ರುಚಿಕರವಾಗಿ ತಯಾರಿಸುತ್ತೇವೆ. ನಾವು ಮಧ್ಯಾಹ್ನದ ಊಟದ ಕಾರ್ಯಕ್ರಮಗಳ ಅನುಷ್ಠಾನ ಪಾಲುದಾರರಾಗಿ ಸೇವೆ ಸಲ್ಲಿಸುವುದನ್ನು ಮುಂದುವರೆಸುತ್ತೇವೆ ಮತ್ತು ಹಸಿವಿನ ಕಾರಣಕ್ಕಾಗಿ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಕಾರಣಕ್ಕೆ ಮತ್ತಷ್ಟು ಬದ್ಧತೆಯಿಂದ ಕೆಲಸ ಮಾಡುತ್ತೇವೆ” ಎಂದು ಹೇಳಿದರು.

ಅಕ್ಷಯ ಪಾತ್ರ ಫೌಂಡೇಶನ್, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಮಧ್ಯಾಹ್ನದ ಊಟದ ಕರ‍್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. ಆ ಮೂಲಕ ಹಸಿವಿನ ವಿರುದ್ಧ ಹೋರಾಟ ಮಾಡುವಲ್ಲಿ ಮತ್ತು ಶಿಕ್ಷಣವನ್ನು ಉತ್ತೇಜಿಸುವಲ್ಲಿ ಮುಂಚೂಣಿಯಲ್ಲಿದೆ. 16ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿದಿನ 2.16 ಮಿಲಿಯನ್ ಮಕ್ಕಳಿಗೆ ಮಧ್ಯಾಹ್ನದ ಊಟ ಒದಗಿಸುತ್ತಿರುವ ಫೌಂಡೇಶನ್, ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವಲ್ಲಿ ಮತ್ತು ಮಕ್ಕಳು ಶಿಕ್ಷಣ ಮುಂದುವರೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಮೂಲಕ ಫೌಂಡೇಶನ್ ಭಾರತದ ಭವಿಷ್ಯದ ಪೀಳಿಗೆಯನ್ನು ಸಶಕ್ತಗೊಳಿಸುತ್ತದೆ.


Share It

You cannot copy content of this page