ಬೆಂಗಳೂರು: ಕಾಂಗ್ರೆಸ್ನಲ್ಲಿ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಪಡೆಯುವ ಕಸರತ್ತು ಜೋರಾಗಿದ್ದು, ಪಟ್ಟಿ ಅಂತಿಮಗೊಳಿಸುವ ಸಲುವಾಗಿ ಸಿಎಂ ಮತ್ತು ಡಿಸಿಎಂ ದೆಹಲಿಗೆ ದೌಡಾಯಿಸಿದ್ದಾರೆ.
ಕಾಂಗ್ರೆಸ್ಗೆ ಪರಿಷತ್ನಲ್ಲಿ ಪ್ರಸ್ತುತ ಸಂಖ್ಯಾಬಲದ ಆಧಾರದಲ್ಲಿ ಏಳು ಸ್ಥಾನ ಸಿಗಲಿದೆ. ಈ ಏಳು ಸ್ಥಾನಕ್ಕೆ ಅರವತ್ತಕ್ಕೂ ಅಧಿಕ ಮಂದಿ ಪೈಪೋಟಿ ನಡೆಸುತ್ತಿದ್ದಾರೆ. ವಿವಿಧ ವಿಭಾಗಗಳ ಮುಖ್ಯಸ್ಥರು, ಆ ವಿಭಾಗದ ಕಾರ್ಯಕರ್ತರ ಮೂಲಕ, ನಾಯಕರ ಮೂಲಕ ಒತ್ತಡ ಹಾಕುವ ಕೆಲಸ ಮಾಡುತ್ತಿದ್ದಾರೆ. ಕೆಲವರು ಬಲಪ್ರದರ್ಶನ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.
ಕೆಲವು ಸಚಿವರು, ಪರಿಷತ್ ಟಿಕೆಟ್ ವಿಚಾರದಲ್ಲಿ ತಮ್ಮ ಬೆಂಬಲಿಗರಿಗೆ ಬೆನ್ನೆಲುಬಾಗುವ ಪ್ರಯತ್ನ ನಡೆಸಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಟಿಕೆಟ್ ನೀಡುವಂತೆ ಕಲ್ಯಾಣ ಕರ್ನಾಟಕದ ಸಚಿವರ ನಿಯೋಗ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಒತ್ತಡ ಹಾಕಿದರೆ, ಸತೀಶ್ ಹಾರಕಿಹೊಳಿ ನೇರವಾಗಿಯೇ ಪರಿಷತ್ ಸದಸ್ಯರು ಬೆಂಗಳೂರು ಸೆಂಟ್ರಿಕ್ ಆಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ.
ಜಾತೀವಾರು, ಪ್ರಾಂತ್ಯವಾರು, ವಿಭಾಗೀಯವಾರು ಟಿಕೆಟ್ ಹಂಚಿಕೆ ಮಾಡಿ, ಸಾಮಾಜಿಕ ನ್ಯಾಯ ಸಿಗುವಂತೆ ಮಾಡುವುದು ಇದೀಗ ಕಾಂಗ್ರೆಸ್ ಹೈಕಮಾಂಡ್ ಮೇಲಿದೆ. ಇದಕ್ಕೆ ಸಿಎಂ ಮತ್ತು ಡಿಸಿಎಂ ಸಾಥ್ ನೀಡಲಿದ್ದು, ದೆಹಲಿಯಲ್ಲಿ ಬೀಡುಬಿಟ್ಟು, ಹೈಕಮಾಂಡ್ ನಾಯಕರ ಜತೆಗೆ ಚರ್ಚಿಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಇದಕ್ಕಾಗಿಯೇ ಮೇ. 28 ಮತ್ತು 29 ರಂದು ಎರಡು ದಿನ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
