ರಾಜಕೀಯ ಸುದ್ದಿ

ಪರಿಷತ್ ಟಿಕೆಟ್ ಹಂಚಿಕೆಗೆ ನಾಲ್ವರು ಸಚಿವರಿಂದಲೇ ಬಂಡಾಯ!

Share It

ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್​ಗೆ ನಡೆಯುವ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ ತನ್ನ 7 ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ಈಗಾಗಲೇ ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಆದ್ರೆ, ವಿಧಾನಪರಿಷತ್ ಟಿಕೆಟ್​ ಹಂಚಿಕೆ ಬೆನ್ನಲ್ಲೇ ಕಾಂಗ್ರೆಸ್​ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಮುನ್ನ ಜೂನ್ 2 ಚುನಾವಣೆ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿತ್ತು. ಈ ಸಭೆಗೆ ಕೆಲ ಹಿರಿಯ ಸಚಿವರು ಹಾಜರಾಗದೇ ಗೈರಾಗುವ ಮೂಲಕ ತಮ್ಮ ಅಸಮಾಧಾನಗೊಂಡಿದ್ದಾರೆ.

ಸಚಿವರಾದ ಡಾ. ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಕೆ.ಎನ್ ರಾಜಣ್ಣ ಮತ್ತು ಜಮೀರ್ ಅಹಮ್ಮದ್ ಖಾನ್ ನಿನ್ನೆಯ ಶಾಸಕಾಂಗ ಸಭೆಗೆ ಗೈರಾಗಿದ್ದರು. ಈ ಮೂಲಕ ನಾಲ್ವರು ಸಚಿವರು ಅಸಮಾಧಾನ ಹೊರಹಾಕಿದ್ದಾರೆ. ಜಮೀರ್ ಅಹಮ್ಮದ್ ಹುಬ್ಬಳ್ಳಿಯ ತಮ್ಮ ಸಮುದಾಯದಯದ ಇಸ್ಮಾಯಿಲ್​ ತಮಟಗಾರ ಅವರಿಗೆ ಪರಿಷತ್​ ಟಿಕೆಟ್​ ನೀಡಬೇಕೆಂದು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್​ ಮುಂದೆ ಬೇಡಿಕೆ ಇಟ್ಟಿದ್ದರು.

ಆದ್ರೆ, ಹೈಕಮಾಂಡ್ ಇಸ್ಮಾಯಿಲ್​ ತಮಟಗಾರ ಬದಲಿಗೆ ಅದೇ ಮುಸ್ಲಿಂ ಸಮುದಾಯದ ಶಿವಮೊಗ್ಗ ಮೂಲದ ಬಲ್ಕಿಸ್ ಭಾನು ಅವರಿಗೆ ಮಣೆ ಹಾಕಿದೆ. ಇದರಿಂದ ಜಮೀರ್ ಅಹಮ್ಮದ್ ಖಾನ್ ಅವರ ಕಣ್ಣು ಕೆಂಪಾಗಿಸಿದ್ದು, ಶಾಸಕಾಂಗ ಸಭೆಗೆ ಹಾಜರಾಗದೇ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ಗೃಹಸಚಿವ ಡಾ. ಜಿ ಪರಮೇಶ್ವರ್ ತಮ್ಮ ಅಭಿಪ್ರಾಯ ಕೇಳಿ ಟಿಕೆಟ್​ ನೀಡಬೇಕೆಂದು ಈ ಹಿಂದೆಯೇ ಹೇಳಿದ್ದರು. ಆದ್ರೆ, ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಹಿರಿಯ ಸಚಿವರ ಅಭಿಪ್ರಾಯ ಕೇಳದೇ ಏಕಾಂಗಿಯಾಗಿ ತಾವೇ ಸ್ವಯಂ ನಿರ್ಧಾರ ತೆಗೆದುಕೊಂಡು ಹೈಕಮಾಂಡ್​ಗೆ ಅಭ್ಯರ್ಥಿಗಳ ಪಟ್ಟಿ ಶಿಫಾರಸ್ಸು ಮಾಡಿರುವುದು ಗೃಹ ಸಚಿವ ಪರಮೇಶ್ವರ್ ಅಸಮಾಧಾನಕ್ಕೆ ಕಾರಣವಾಗಿದೆ.

ಸಚಿವರಾದ ಪರಮೇಶ್ವರ್ ಹಾಗೂ ಕೆ.ಎನ್. ರಾಜಣ್ಣ ಅವರು ದಲಿತ, ಅತಿ ಹಿಂದುಳಿದವರಿಗೆ ಟಿಕೆಟ್ ಕೇಳಿದ್ದರು. ಆದರೆ ಹಿರಿಯ ಸಚಿವರ ಯಾವೊಬ್ಬ ಬೆಂಬಲಿಗರಿಗೂ ಮನ್ನಣೆ ಸಿಕ್ಕಿಲ್ಲ. ಹೀಗಾಗಿ ಕೆ.ಎನ್. ರಾಜಣ್ಣ, ಪರಮೇಶ್ವರ್, ಶಾಸಕಾಂಗ ಸಭೆಗೆ ಗೈರಾಗುವ ಮೂಲಕ ಹೈಕಮಾಂಡ್ ನಿರ್ಧಾರಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಮತ್ತೋರ್ವ ಸಚಿವ ಸತೀಶ್ ಜಾರಕಿಹೊಳಿ ಅವರು ಸಹ ಮುಂಬೈ ಕರ್ನಾಟಕ ಭಾಗದವರಿಗೆ ವಿಧಾನಪರಿಷತ್​ ಟಿಕೆಟ್ ಕೇಳಿದ್ದರು. ಅವರ ಮನವಿಗೂ ಹೈಕಮಾಂಡ್​ ಕ್ಯಾರೇ ಎಂದಿಲ್ಲ. ಹೀಗಾಗಿ ಸತೀಶ್ ಜಾರಕಿಹೊಳಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಧಾರವಾಡದಲ್ಲಿ ಪ್ರತಿಭಟನೆ: ಇಸ್ಮಾಯಿಲ್ ತಮಟಗಾರಗೆ ಕಾಂಗ್ರೆಸ್ MLC ಟಿಕೆಟ್ ಕೈತಪ್ಪಿದ್ದಕ್ಕೆ ಆಕ್ರೋಶ ಭುಗಿಲೆದ್ದಿದೆ. ಧಾರವಾಡದ ಬೆಳಗ್ಗೆ ಅಂಬೇಡ್ಕರ್​ ಪ್ರತಿಮೆ ಎದುರು ಇಸ್ಮಾಯಿಲ್ ತಮಟಗಾರ ಬೆಂಬಲಿಗರು ಪ್ರತಿಭಟನೆಗೆ ಯತ್ನಿಸಿದರು. ಆದ್ರೆ, ಲೋಕಸಭಾ ಫಲಿತಾಂಶದ ನಿಷೇಧಾಜ್ಞೆ ಹಿನ್ನೆಲೆ ಪೊಲೀಸರು, ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಬಳಿಕ ಪ್ರತಿಭಟನೆಕಾರರು ಧಾರವಾಡದ ಶಿವಗಿರಿ ಕಾಲೋನಿಯ ಕೆಪಿಸಿಸಿ ಕಾರ್ಯಾಧ್ಯಕ್ಷ ಕುಲಕರ್ಣಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.


Share It

You cannot copy content of this page