ಕ್ರೀಡೆ ಸುದ್ದಿ

ಒಲಿಂಪಿಕ್ಸ್‌: ಕುಸ್ತಿಯಲ್ಲಿ ಕಂಚು ಗೆದ್ದು ಭಾರತಕ್ಕೆ 6ನೇ ಪದಕ ತಂದ ಅಮನ್ ಸೆಹ್ರಾವತ್

Share It

2024ನೇ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತ 6ನೇ ಪದಕವನ್ನು ಗೆದ್ದುಕೊಂಡಿದೆ. ಚೊಚ್ಚಲ ಒಲಿಂಪಿಕ್ಸ್ ಆಡುತ್ತಿರುವ ಅಮನ್ ಸೆಹ್ರಾವತ್ ಪುರುಷರ 57 ಕೆಜಿ ತೂಕ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕಕ್ಕೆ ಗೆದ್ದಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಪೋರ್ಟೊರಿಕೊ ದೇಶದ ಕುಸ್ತಿಪಟು ಡೇರಿಯನ್ ಟೊಯಿ ಕ್ರೂಜ್ ಅವರನ್ನು 13-5 ರಿಂದ ಏಕಪಕ್ಷೀಯವಾಗಿ ಸೋಲಿಸುವ ಮೂಲಕ ಅಮನ್ ಸೆಹ್ರಾವತ್ ಕಂಚಿನ ಪದಕವನ್ನು ಗೆದ್ದುಕೊಂಡರು. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 6ನೇ ಪದಕ ದಕ್ಕಿದೆ. ಒಟ್ಟಾರೆ, ಈ ಕ್ರೀಡಾಕೂಟದಲ್ಲಿ ಇದು ಭಾರತಕ್ಕೆ 5 ನೇ ಕಂಚಿನ ಪದಕವಾಗಿದ್ದರೆ, ಕುಸ್ತಿಯಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕವಾಗಿದೆ.

ಕುಸ್ತಿಯಲ್ಲಿ ಸತತ 5ನೇ ಪದಕ
ಅಮನ್ ಸೆಹ್ರಾವತ್ ಅವರ ಈ ಪದಕದೊಂದಿಗೆ 2008 ರಿಂದ ಕುಸ್ತಿಯಲ್ಲಿ ಭಾರತದ ಪದಕದ ಗೆಲುವಿನ ಸರಣಿ ಮುಂದುವರೆದಿದೆ. 2008 ರಿಂದ ಇಲ್ಲಿಯವರೆಗೆ, ಭಾರತವು ಸತತ 5 ಒಲಿಂಪಿಕ್ಸ್‌ಗಳಲ್ಲಿ ಕುಸ್ತಿಯಲ್ಲಿ ಪದಕಗಳನ್ನು ಗೆದ್ದಿದೆ. ಇದರೊಂದಿಗೆ ಹಾಕಿ ನಂತರ, ಭಾರತಕ್ಕೆ ಗರಿಷ್ಠ ಸಂಖ್ಯೆಯ ಪದಕ ಬಂದಿರುವುದು ಈ ಕುಸ್ತಿಯಲ್ಲಿ. ಇದುವರೆಗೆ ಭಾರತ ಕುಸ್ತಿಯಲ್ಲಿ 8 ಒಲಿಂಪಿಕ್ ಪದಕಗಳನ್ನು ಗೆದ್ದುಕೊಂಡಿದೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ 1952 ರಲ್ಲಿ ಕೆ‌.ಡಿ ಜಾಧವ್ ಭಾರತದ ಪರ ಕುಸ್ತಿಯಲ್ಲಿ ಕಂಚಿನ ಪದಕವನ್ನು ಗೆದ್ದರು. ಇದಾದ ನಂತರ ಭಾರತ 56 ವರ್ಷಗಳ ಕಾಲ ಕುಸ್ತಿಯಲ್ಲಿ ಪದಕದ ಬರ ಎದುರಿಸಬೇಕಾಯಿತು. ಆನಂತರ ಸುಶೀಲ್ ಕುಮಾರ್ 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಈ ಬರವನ್ನು ಕೊನೆಗೊಳಿಸಿದ್ದರು.

ಆನಂತರ 2012ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್​ನಲ್ಲಿ ಸುಶೀಲ್ ಕುಮಾರ್ ಬೆಳ್ಳಿ ಹಾಗೂ ಯೋಗೇಶ್ವರ್ ದತ್ ಕಂಚಿನ ಪದಕ ಗೆದ್ದಿದ್ದರು. ಇದರ ನಂತರ, 2016 ರಲ್ಲಿ ನಡೆದಿದ್ದ ರಿಯೊ ಒಲಿಂಪಿಕ್ಸ್​ನಲ್ಲಿ ಸಾಕ್ಷಿ ಮಲಿಕ್ ಕಂಚು ಗೆದ್ದಿದ್ದರು. ಹಾಗೆಯೇ 2020 ರಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್​ನಲ್ಲಿ, ರವಿ ದಹಿಯಾ 57 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರೆ, ಬಜರಂಗ್ ಪುನಿಯಾ ಕಂಚಿನ ಪದಕ ಗೆದ್ದಿದ್ದರು. ಇದೀಗ ಅಮನ್ ಸೆಹ್ರಾವತ್ ಈ ಟ್ರೆಂಡ್ ಅನ್ನು ಮುಂದುವರೆಸಿದ್ದಾರೆ.

ಪ್ರಧಾನಿ ಮೋದಿ ಮೆಚ್ಚುಗೆ…
ಇನ್ನು ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಪದಕ ಹಾಗೂ ಒಟ್ಟಾರೆ ದೇಶಕ್ಕೆ 6ನೇ ಪದಕವನ್ನು ಗೆದ್ದುಕೊಟ್ಟ ಕುಸ್ತಿಪಟು ಅಮನ್ ಸೆಹ್ರಾವತ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು, “ನಮ್ಮ ಕುಸ್ತಿಪಟುಗಳು ನಮಗೆ ಇನ್ನಷ್ಟು ಹೆಮ್ಮೆ ತಂದಿದ್ದಾರೆ! ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಅಮನ್ ಸೆಹ್ರಾವತ್ ಅವರಿಗೆ ಅಭಿನಂದನೆಗಳು. ಅವರ ಸಮರ್ಪಣೆ ಮತ್ತು ದೃಢತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇಡೀ ರಾಷ್ಟ್ರವು ಈ ಅದ್ಭುತ ಸಾಧನೆಯನ್ನು ಆಚರಿಸುತ್ತಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸೆಮೀಸ್​ನಲ್ಲಿ ಏಕಪಕ್ಷೀಯ ಸೋಲು

ಅಮನ್ ಸೆಮಿಫೈನಲ್‌ನಲ್ಲಿ ಜಪಾನ್‌ನ ರೇ ಹಿಗುಚಿ ವಿರುದ್ಧ 0-10 ಅಂತರದಿಂದ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಆದರೆ, ಕಂಚಿನ ಪದಕದ ಪಂದ್ಯದಲ್ಲಿ ಆರಂಭದಿಂದಲೇ ಒತ್ತಡ ಹೇರಿದ ಅವರು ಡೇರಿಯನ್ ಟೊಯಿ ಕ್ರೂಜ್​ಗೆ ಹೆಚ್ಚಿನ ಅವಕಾಶ ನೀಡದೆ, ಅದ್ಭುತ ಆಟ ಪ್ರದರ್ಶಿಸಿ 13-5 ರಿಂದ ಪಂದ್ಯವನ್ನು ಗೆದ್ದುಕೊಂಡರು. ಈ ಮೂಲಕ ತಮ್ಮ ಚೊಚ್ಚಲ ಒಲಿಂಪಿಕ್ಸ್​ನಲ್ಲೇ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.


Share It

You cannot copy content of this page