ರಾಜಕೀಯ ಸುದ್ದಿ

ರಾಜಕೀಯ ಮರುಜನ್ಮ ನೀಡಿದ ಚುನಾವಣೆ

Share It

ಬೆಂಗಳೂರು: ಲೋಕಸಭೆ ಚುನಾವಣೆ ರಾಜ್ಯದ ಕೆಲವು ಪ್ರಮುಖ ನಾಯಕರಿಗೆ ರಾಜಕೀಯ ಮರುಜನ್ಮ ನೀಡಿದೆ ಎನ್ನಬಹುದು.

ಬಿಜೆಪಿಯ ಜಗದೀಶ್ ಶೆಟ್ಟರ್, ಡಾ.ಸುಧಾಕರ್, ಗೋವಿಂದ ಕಾರಜೋಳ, ವಿ.ಸೋಮಣ್ಣ ಅವರಿಗೆ ಈ ಚುನಾವಣೆ ರಾಜಕೀಯ ಪುನರ್ಜನ್ಮ ನೀಡಿದೆ ಎನ್ನಬಹುದು. ಇನ್ನೇನು ಇವರ ರಾಜಕೀಯ ಅಂತ್ಯವಾಯಿತು ಎಂದುಕೊಂಡಿದ್ದ ಕೆಲ ರಾಜಕಾರಣಗಳಿಗೆ, ಬಿಜೆಪಿ ನಾಯಕರಿಗೆ ಲೋಕಸಭಾ ಚುನಾವಣೆ ಮರುಜನ್ಮ ನೀಡಿದೆ ಎನ್ನಬಹುದು.

ವಿಧಾನಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಬಿಜೆಪಿಯಲ್ಲಿ ಟಿಕೆಟ್ ಸಿಗದೆ, ಕಾಂಗ್ರೆಸ್‌ಗೆ ಬಂದು, ಅಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಲೋಕಸಭೆ ಚುನಾವಣೆ ವೇಳೆಗಾಗಲೇ ಮರಳಿ ಬಿಜೆಪಿ ಸೇರಿದ್ದ ಅವರು, ಹುಬ್ಬಳ್ಳಿ-ಧಾರವಾಡ ಅಥವಾ ಹಾವೇರಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಅಲ್ಲಿಯೂ ಸಿಕ್ಕಿರಲಿಲ್ಲ.

ಈ ವೇಳೆ ಅನಿವಾರ್ಯವಾಗಿ ಅವರಿಗೆ ಬೆಳಗಾವಿಯ ಟಿಕೆಟ್ ನೀಡಲಾಗಿತ್ತು. ಬೆಳಗಾವಿ ಬಿಜೆಪಿಯಲ್ಲಿ ಅನೇಕರು ಇದನ್ನು ವಿರೋಧಿಸಿ, ಅವರು ವಲಸಿಗರು ಎಂಬ ಕಾರಣ ನೀಡಿ ಸರಿಯಾಗಿ ಕೆಲಸ ಮಾಡಿರಲಿಲ್ಲ. ಇದೆಲ್ಲದರ ನಡುವೆಯೂ ಅವರು ಗೆಲುವು ಸಾಧಿಸಿ, ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಿದ್ದಾರೆ.

ಡಾ.ಸುಧಾಕರ್ ಅವರಿಗೆ ಚಿಕ್ಕಬಳ್ಳಾಪುರದಲ್ಲಿ ಆದ ಸೋಲಿನ ನಂತರ ಅವರ ರಾಜಕೀಯ ಜೀವನ ಮುಗಿದೇ ಹೋಗಿತ್ತು ಎಂಬ ಅಭಿಪ್ರಾಯ ಮೂಡಿತ್ತು. ಲೋಕಸಭಾ ಚುನಾವಣೆಯ ಟಿಕೆಟ್ ಸಿಗುವ ನಿಟ್ಟಿನಲ್ಲಿಯೂ ವಿರೋಧವಿತ್ತು. ಅವರು ಕಾಂಗ್ರೆಸ್‌ಗೆ ಬರುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು. ಈ ನಡುವೆ ಅವರು ಗೆಲ್ಲುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿಯ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ವಿ.ಸೋಮಣ್ಣ ತಾವು ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಎರಡು ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ್ದರು. ಹೀಗಾಗಿ, ಅವರ ರಾಜಕೀಯ ಜೀವನ ಮುಗಿಯಿತು ಎಂದು ಹೇಳಲಾಗಿತ್ತು. ಅವರಿಗೆ ತುಮಕೂರು ಟಿಕೆಟ್ ಕೊಡುವ ನಿಟ್ಟಿನಲ್ಲಿಯೂ ವಿರೋಧವಿತ್ತು. ಆದರೂ, ತುಮಕೂರಿನಲ್ಲಿ ಗೆಲ್ಲುವ ಮೂಲಕ ರಾಜಕೀಯ ಪುನರ್ಜನ್ಮ ಪಡೆದುಕೊಂಡಿದ್ದಾರೆ.

ಅದೇ ರೀತಿ ಮುಧೋಳದಲ್ಲಿ ಸೋಲು ಕಂಡು ರಾಜಕೀಯ ಜೀವನದ ಕೊನೆಯ ಘಟ್ಟದಲ್ಲಿದ್ದ ಗೋವಿಂದ ಕಾರಜೋಳ ಅವರು ಕೂಡ ಚಿತ್ರದುರ್ಗದ ಗೆಲುವಿನ ಮೂಲಕ ಮರುಜನ್ಮ ಪಡೆದುಕೊಂಡಿದ್ದಾರೆ. ಚಿತ್ರದುರ್ಗದಲ್ಲಿ ಕಾಂಗ್ರೆಸ್‌ನ ಚಂದ್ರಪ್ಪ ಗೆಲುವು ಸುಲಭ ಎಂಬ ಪರಿಸ್ಥಿತಿಯ ನಡುವೆಯೂ ಕಾರಜೋಳ ಗೆಲುವು ಸಾಧಿಸಿ, ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿದ್ದಾರೆ ಎನ್ನಬಹುದು.


Share It

You cannot copy content of this page