ಕಲಬುರಗಿ: ರಾಜ್ಯದಲ್ಲಿ ಹೆಚ್ಚಾದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಲಬುರಗಿಯಲ್ಲಿ ಎತ್ತಿನ ಬಂಡಿಯೊಂದಿಗೆ ರಸ್ತೆಗಿಳಿದು ಬಿಜೆಪಿ ಮುಖಂಡರ ವಿನೂತನ ಪ್ರತಿಭಟನೆ ನಡೆಸಿದರು.
ಕಲಬುರಗಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ಸಿಎಂ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ತೈಲ ಬೆಲೆ ಏರಿಕೆಯಿಂದ ಜನ ವಾಹನ ಮನೆಯಲ್ಲಿಟ್ಟು ಮತ್ತೆ ಎತ್ತಿನ ಬಂಡಿಯಲ್ಲಿ ಸಂಚರಿಸುವಂತಾಗಿದೆ ಎಂದು ವ್ಯಂಗ್ಯ ಮಾಡಿದರು.
ರಾಜ್ಯ ಸರಕಾರ ತೈಲ ಬೆಲೆ ಹೆಚ್ಚಳದ ಮೂಲಕ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಮತ ಹಾಕದ ಜನರ ಮೇಲೆ ಈ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆ ಎಂದು ದೂರಿದ ಪ್ರತಿಭಟನಾನಿರತರು ರಾಜ್ಯ ಸರ್ಕಾರ ರೈತ ವಿರೋಧಿ, ಜನ ವಿರೋಧಿ ಸರಕಾರವಾಗಿದ್ದು, ಭ್ರಷ್ಟಾಚಾರದಲ್ಲಿ ಮುಳಿಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಶಾಸಕರಾದ ಬಸವರಾಜ ಮತ್ತಿಮೂಡ, ಡಾ ಅವಿನಾಶ್ ಜಾಧವ್, ವಿಧಾನ ಪರಿಷತ್ ಸದಸ್ಯರಾದ ಶಶೀಲ ನಮೋಶಿ, ಮಾಜಿ ಶಾಸಕರಾದ ಅಮರನಾಥ ಪಾಟೀಲ್, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ್ ಪಾಟೀಲ್ ತೆಲ್ಕೂರ, ಬಾಬುರಾವ್ ಚವ್ಹಾಣ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್, ಹರ್ಷಾನಂದ ಗುತ್ತೆದಾರ ಸೇರಿದಂತೆ ಅನೇಕ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

