ಹೈದರಾಬಾದ್: ಸಿನಿಮಾ ಎಂಬ ಬಣ್ಣದ ಬದುಕಿನಲ್ಲಿ ಹೀರೋ ಆಗಿ ಮಿಂಚಿ ಜನ ಸಾಮಾನ್ಯರಿಗೆ ಸೆಲೆಬ್ರಿಟಿ ಆಗಿದ್ದ ನಟ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಡಿಸಿಎಂ ಆಗುವ ಮೂಲಕ ನಿಜ ಜೀವನದಲ್ಲೂ ಜನ ಸಾಮಾನ್ಯರಿಗೆ ಹೀರೋ ಆಗಿದ್ದಾರೆ.
ತಾವೇ ಕಟ್ಟಿದ ಜನಸೇನಾ ಪಕ್ಷದಿಂದ ಜನಸೇನಾ ಪಾರ್ಟಿಯಿಂದ ಆಂಧ್ರದ ಪೀಠಪುರಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಡಿಸಿಎಂ ಹುದ್ದೆಯಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ಪವನ್ ಕಲ್ಯಾಣ್ ಅವರ ಜೀವಕ್ಕೆ ಅಪಾಯ ಇದೆಯೆಂದು ಗುಪ್ತಚರ ಇಲಾಖೆಗಳು ಎಚ್ಚರಿಸಿರುವುದಾಗಿ ವರದಿಯಾಗಿದೆ
ಕೆಲ ಕಿಡಿಗೇಡಿಗಳ ರಾಜಕೀಯವಾಗಿ ಉನ್ನತಮಟ್ಟದಲ್ಲಿ ಬೆಳೆದಿರುವ ಪವನ್ ಕಲ್ಯಾಣ್ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ. ಅವರು ಎಲ್ಲಿ ಹೋದರೂ ಅವರಿಗೆ ಹೆಚ್ಚಿನ ಭದ್ರತೆ ನೀಡಬೇಕು. ಅವರು ಬಹಳ ಎಚ್ಚರದಿಂದ ಇರಬೇಕೆಂದು ಗುಪ್ತಚರ ಇಲಾಖೆ ಆಂಧ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ʼಟೈಮ್ಸ್ ಆಫ್ ಇಂಡಿಯಾʼ ವರದಿ ತಿಳಿಸಿದೆ.
ಇತ್ತ ಜನಸೇನಾ ಪಕ್ಷ ಕೂಡ ಈ ವಿಚಾರವನ್ನು ಖಚಿತಪಡಿಸಿವೆ. ಹಾಗಾಗಿ ಪವನ್ ಕಲ್ಯಾಣ್ ಅವರಿಗೆ ಝುಡ್ ಪ್ಲಸ್ ಭದ್ರತೆ ನೀಡಬೇಕೆಂದು ಜನಸೇನಾ ಪಕ್ಷ ಬೇಡಿಕೆಯಿಟ್ಟಿದೆ ಎಂದು ವರದಿಯಾಗಿದೆ.
ಹಿಂದೆ ಸ್ವತಃ ಪವನ್ ಕಲ್ಯಾಣ್ ಅವರೇ ತಮ್ಮ ಪ್ರಾಣಕ್ಕೆ ಅಪಾಯ ಇರುವುದಾಗಿ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದರು. ಈಗ ಗುಪ್ತಚರ ಇಲಾಖೆಗೂ ಈ ಮಾಹಿತಿ ಬಂದಿದೆ ಎನ್ನಲಾಗಿದೆ. ಹಾಗಾಗಿ ಅವರು ಎಚ್ಚರದಿಂದ ಇರಬೇಕೆಂದು ಹೇಳಿದೆ.
ಪವನ್ ಕಲ್ಯಾಣ್ ಆಂಧ್ರ ರಾಜಕೀಯ ವಲಯದಲ್ಲಿ ಏಳಿಗೆಯನ್ನು ಸಾಧಿಸಿದ್ದಾರೆ. ನರೇಂದ್ರ ಮೋದಿ ಅವರ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯವನ್ನು ಸಾಧಿಸಿದ್ದಾರೆ. ಈ ವಿಚಾರ ಅವರ ವಿರೋಧಿಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಹಾಗಾಗಿ ಅವರ ಹತ್ಯೆಗೆ ಯೋಜನೆ ರೂಪಿಸಿರಬಹುದೆಂದು ಶಂಕಿಸಲಾಗಿದೆ. ಸದ್ಯ ಈ ಸುದ್ದಿ ಆಂಧ್ರದಲ್ಲಿ ಹರಿದಾಡಿದ್ದು, ಸಿನಿಮಾವಲಯದಲ್ಲಿನ ಅವರ ಅಪಾರ ಅಭಿಮಾನಿಗಳಿಗೆ ಈ ವಿಚಾರದಿಂದಾಗಿ ಶಾಕ್ ಆಗಿದೆ.