ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಪತ್ರದ ಮೂಲಕ ಜೀವ ಬೆದರಿಕೆ ಹಾಕಿರುವುದಾಗಿ ಪವಿತ್ರ ಎಂಬ ಮಹಿಳೆ ದೂರು ನೀಡಿದ್ದು, ಬಸವೇಶ್ವರ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೂರುದಾರೆ ಪವಿತ್ರ 2022ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಅಂದಿನ ನಿರ್ದೇಶಕರಾಗಿದ್ದ ಪ್ರೊ ಬಿ.ಸಿ ಮೈಲಾರಪ್ಪ ನಡೆಸುತ್ತಿದ್ದ ಕರ್ನಾಟಕ ರಾಜ್ಯ ಹರಿಜನ ಸೇವಕ ಸಂಘದಲ್ಲಿ ಕೆಲಸಕ್ಕೆ ಸೇರಿದ್ದರು. 2 ವರ್ಷ ಕೆಲಸ ಮಾಡಿ 2024ರ ಮೇ ತಿಂಗಳಿನಲ್ಲಿ ಕೆಲಸ ಬಿಟ್ಟಿದ್ದರು. ಆದರೆ 2024ರ ಅಂತ್ಯದಲ್ಲಿ ಪವಿತ್ರ ಅವರ ಪತಿ ಅಸಹಜವಾಗಿ ಸಾವನ್ನಪ್ಪಿದ್ದರು.
ಆ ಸಂದರ್ಭದಲ್ಲಿ ಮಗನ ಸಾವಿಗೆ ನೀನೇ ಕಾರಣ ಎಂದು ಮಹಿಳೆ ಅತ್ತೆ, ಮಾವ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ಆಸ್ತಿ ವಿಚಾರವಾಗಿ ತೊಂದರೆಯಾದಾಗ ವಕೀಲರನ್ನ ಭೇಟಿಯಾದಾಗ ಮೈಲಾರಪ್ಪ ಅವರು ಮಧ್ಯಪ್ರವೇಶಿಸಿ ತೊಂದರೆ ನೀಡುತ್ತಿದ್ದಾರೆ ಎಂದು ಈ ಹಿಂದೆ ಪವಿತ್ರ ಬಸವೇಶ್ವರನಗರ ಠಾಣೆಗೆ ದೂರು ನೀಡಿದ್ದರು.
ಆದರೆ, ಇದೀಗ ಡಿ. 5ರಂದು ತಮಗೆ ಪತ್ರ ರವಾನಿಸಿರುವ ಸ್ನೇಹಮಯಿ ಕೃಷ್ಣ ಅವರು ಮೈಲಾರಪ್ಪ ಅವರ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆಯುವಂತೆ ತಾಕೀತು ಮಾಡಿದ್ದಾರೆ ಎಂದು ಪವಿತ್ರ ಆರೋಪಿಸಿದ್ದಾರೆ. ದೂರಿನನ್ವಯ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಬಸವೇಶ್ವರ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

