ಬೆಂಗಳೂರು: ಬಿಗ್‌ಬಾಸ್ 12 ಕ್ಕೆ ಆಗಾಗ ಸಂಕಷ್ಟಗಳು ಎದುರಾಗುತ್ತಲೇ ಇದ್ದು, ಇದೀಗ ಸುದೀಪ್ ಅವರು ರಣಹದ್ದುಗಳ ಬಗ್ಗೆ ಹೇಳಿದ ಹೇಳಿಕೆ ವಿರುದ್ಧ ದೂರು ದಾಖಲಾಗಿದೆ.
ನಟ ಸುದೀಪ್ ಮತ್ತು ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಬೆಂಗಳೂರು ದಕ್ಷಿಣ ವಿಭಾಗದ ಡಿಎಫ್‌ಒಗೆ ಕರ್ನಾಟಕ ರಣಹದ್ದುಗಳ ರಕ್ಷಣಾ ಸಮಿತಿ ದೂರು ನೀಡಿದ್ದು, ಸುದೀಪ್ ನೀಡಿದ ಹೇಳಿಕೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ.
ಸುದೀಪ್, ರಣಹದ್ದುಗಳು ಹೊಂಚುಹಾಕಿ ಭೇಟಿಯಾಡುತ್ತವೆ ಎಂದು ಹೇಳಿಕೆ ನೀಡಿದ್ದರು. ಆದರೆ, ರಣಹದ್ದುಗಳು ಎಂದಿಗೂ ಜೀವಂತ ಪ್ರಾಣಿಗಳನ್ನು ಭೇಟಿಯಾಡುವುದಿಲ್ಲ. ಅದು ಸತ್ತ ಪ್ರಾಣಿಗಳನ್ನು ತಿನ್ನುವ ಮೂಲಕ ಪೌರಕಾರ್ಮಿಕನ ಕೆಲಸ ಮಾಡುತ್ತದೆ ಎಂಬುದು ಪಕ್ಷಿಪ್ರಿಯರ ಆಕ್ಷೇಪವಾಗಿದೆ.
ಸುದೀಪ್ ಅವರು, ತಪ್ಪು ಮಾಹಿತಿಯಿಂದ ಹೀಗೆ ಮಾತನಾಡಿದ್ದು, ಅದನ್ನು ಸರಿಪಡಿಸಿಕೊಳ್ಳಬೇಕು. ಕಾರ್ಯಕ್ರಮದ ಆಯೋಜಕರು ಮತ್ತು ಸುದೀಪ್‌ಗೆ ಈ ಬಗ್ಗೆ ಅರಣ್ಯಾಧಿಕಾರಿಗಳು ಮಾಹಿತಿ ನೀಡಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ.

