ಬೆಂಗಳೂರು: ಗಡಿ ಭಾಗವಾದ ಮಹಾರಾಷ್ಟ್ರದ ಜತ್ ಮತ್ತು ಸೊಲ್ಲಾಪುರ ಜಿಲ್ಲೆಗಳಲ್ಲಿನ ಕನ್ನಡ ಶಾಲೆಗಳಿಗೆ 24 ಮರಾಠಿ ಶಿಕ್ಷಕರನ್ನು ನೇಮಕ ಮಾಡಿರುವ ಬಗ್ಗೆ ಮಹಾರಾಷ್ಟ್ರ ಸರಕಾರಕ್ಕೆ ಪತ್ರ ಬರೆದು, ಆ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಕ ಮಾಡುವಂತೆ ಒತ್ತಾಯಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ.
ಈ ಹಿಂದೆಯೂ ಕೇರಳ ಸರಕಾರ ಇದೇ ರೀತಿ ಕಾಸರಗೋಡಿನಲ್ಲಿನ ಕನ್ನಡ ಶಾಲೆಯೊಂದಕ್ಕೆ ಮಲಯಾಳಂ ಭಾಷೆಯ ಶಿಕ್ಷಕರನ್ನು ನೇಮಿಸಿತ್ತು. ಇದಕ್ಕೆ ನಮ್ಮ ರಾಜ್ಯಸರ್ಕಾರದ ಮಧ್ಯಪ್ರವೇಶದ ಬಳಿಕ ಕೇರಳ ಸರಕಾರ ಕನ್ನಡ ಶಿಕ್ಷಕರನ್ನು ನೇಮಿಸಿತ್ತು. ಇದೀಗ ಮಹಾರಾಷ್ಟ್ರದ ಶಿಕ್ಷಣ ಸಚಿವರಿಗೆ ಪತ್ರ ಬರೆದು ಅಲ್ಲಿನ ವಾಸ್ತವ ಸ್ಥಿತಿ ಬಗ್ಗೆ ತಿಳಿಸಲಾಗಿದೆ ಎಂದರು.
ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕಡ್ಡಾಯವಾಗಿ ಕನ್ನಡ ಭಾಷಾ ಮಾಧ್ಯಮದಲ್ಲಿ ಪಾಠ ಮಾಡುವ ಶಿಕ್ಷಕರನ್ನೇ ಕನ್ನಡ ಮಾಧ್ಯಮ ಶಾಲೆಗಳಿಗೆ ಮಹಾರಾಷ್ಟ್ರ ಸರಕಾರ ನೇಮಿಸಬೇಕು. ಈಗಾಗಲೇ ಈ ವಿಚಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಚರ್ಚೆ ನಡೆಸಿದ್ದೇನೆ. ಗಡಿಭಾಗದಲ್ಲಿ ಕನ್ನಡ ಭಾಷೆ ಹಾಗೂ ಕನ್ನಡದ ಉಳಿವಿಗೆ ನಮ್ಮ ಸರಕಾರ ವಿಶೇಷ ಕಾಳಜಿ ಹೊಂದಿದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.
