ವಿನಯಕ್ಕೆ ಮೆಚ್ಚುಗೆ: ಕಿಚ್ಚ ಸುದೀಪ್ ಶುಭಾಶಯಕ್ಕೆ ಗೌರವದ ಪ್ರತಿಕ್ರಿಯೆ ನೀಡಿದ ಯಶ್
ನಟ ಯಶ್ ಅವರ ಹೊಸ ಸಿನಿಮಾ ‘ಟಾಕ್ಸಿಕ್’ ಟೀಸರ್ ಬಿಡುಗಡೆಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ನಡುವೆ ಕಿಚ್ಚ ಸುದೀಪ್ ಅವರು ಯಶ್‌ಗೆ ಶುಭಾಶಯ ಕೋರಿದ ಟ್ವೀಟ್‌ಗೂ, ಅದಕ್ಕೆ ಯಶ್ ನೀಡಿದ ಪ್ರತಿಕ್ರಿಯೆಯೂ ಹೆಚ್ಚು ಗಮನ ಸೆಳೆದಿದೆ. ವಿಶೇಷವಾಗಿ ಯಶ್ ಅವರು ಸುದೀಪ್ ಅವರನ್ನು ‘ಸರ್’ ಎಂದು ಸಂಬೋಧಿಸಿರುವುದು ಕಿಚ್ಚ ಅಭಿಮಾನಿಗಳಿಗೆ ಸಂತಸ ತಂದಿದೆ.
ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಕಿಚ್ಚ ಸುದೀಪ್ ಟ್ವೀಟ್ ಮಾಡಿ, “ಅಲೆಗಳ ವಿರುದ್ಧ ಈಜಲು ಸಮಯ ಬೇಕಾಗುತ್ತದೆ. ನಿಮ್ಮ ಈ ಹೊಸ ಪ್ರಯತ್ನ ನೀವು ಗುರಿಯಾಗಿಟ್ಟುಕೊಂಡಿರುವ ಸ್ಥಾನಕ್ಕೆ ಕರೆದೊಯ್ಯಲಿ. ನಿಮಗೆ ಶುಭಾಶಯಗಳು” ಎಂದು ಆಶಯ ವ್ಯಕ್ತಪಡಿಸಿದ್ದರು. ಈ ಮಾತುಗಳಿಗೆ ಪ್ರತಿಕ್ರಿಯಿಸಿದ ಯಶ್, “ಥ್ಯಾಂಕ್ಯೂ ಸರ್. ಏಕಾಗ್ರತೆ, ಪ್ರಾಮಾಣಿಕತೆ ಮತ್ತು ಧೈರ್ಯದಿಂದ ನಮ್ಮ ಕೆಲಸ ಮಾಡಬೇಕು. ಉತ್ತಮ ಸಿನಿಮಾಗಳನ್ನು ನೀಡಬೇಕು ಎಂಬುದನ್ನು ನಾನು ನೀವು ಸೇರಿದಂತೆ ನನ್ನ ಎಲ್ಲ ಹಿರಿಯ ಕಲಾವಿದರಿಂದ ಕಲಿತಿದ್ದೇನೆ” ಎಂದು ಬರೆಯುವ ಮೂಲಕ ಗೌರವ ವ್ಯಕ್ತಪಡಿಸಿದ್ದಾರೆ.
ಯಶ್ ಅವರ ಈ ಪ್ರತಿಕ್ರಿಯೆ ಸುದೀಪ್ ಅವರ ಶುಭಾಶಯಕ್ಕಿಂತಲೂ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಕಾರಣ, ಹಿಂದೆ ಇಬ್ಬರ ಅಭಿಮಾನಿಗಳ ನಡುವೆ ಉಂಟಾಗಿದ್ದ ಅಸಮಾಧಾನದ ಹಿನ್ನೆಲೆ. 2018ರಲ್ಲಿ ನಡೆದ ಫಿಟ್ನೆಸ್ ಚಾಲೆಂಜ್ ಸಂದರ್ಭದಲ್ಲೇ ಈ ವಿಚಾರ ದೊಡ್ಡ ವಿಚಾರವಾಗಿ ಬೆಳೆದಿತ್ತು. ಆಗ ಸುದೀಪ್ ನೀಡಿದ ಚಾಲೆಂಜ್‌ಗೆ ಪ್ರತಿಕ್ರಿಯಿಸಿದ ಯಶ್, ವಿಡಿಯೋದಲ್ಲಿ “ಸುದೀಪ್ ಕೊಟ್ಟ ಚಾಲೆಂಜ್” ಎಂದು ಹೇಳಿದ್ದಕ್ಕೆ ಕಿಚ್ಚ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ‘ಸುದೀಪ್ ಸರ್’ ಎಂದು ಹೇಳಬೇಕಿತ್ತು ಎಂಬ ಕಾರಣಕ್ಕೆ ಅಭಿಮಾನಿಗಳ ನಡುವೆ ತೀವ್ರ ವಾಗ್ವಾದವೂ ನಡೆದಿತ್ತು.
ಆ ವೇಳೆ ಸ್ವತಃ ಸುದೀಪ್ ಮಧ್ಯ ಪ್ರವೇಶಿಸಿ, ಯಶ್ ತಮ್ಮ ವಿಡಿಯೋವನ್ನು ಪ್ರೀತಿ ಮತ್ತು ಗೌರವದಿಂದಲೇ ಪೋಸ್ಟ್ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿ, ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಆದರೂ ಕೆಲಕಾಲ ಇಬ್ಬರ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ಮುಂದುವರಿದಿತ್ತು. ನಂತರ ಸಮಯದೊಂದಿಗೆ ಪರಿಸ್ಥಿತಿ ಶಾಂತಗೊಂಡಿದ್ದು, ಸುಮಾರು ಎರಡು ವರ್ಷಗಳ ಹಿಂದೆ ಇಬ್ಬರೂ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿ ಆತ್ಮೀಯವಾಗಿ ತಬ್ಬಿಕೊಂಡ ಬಳಿಕ ಎಲ್ಲ ಅಸಮಾಧಾನಗಳು ಮಗ್ಗುಚಿದವು.
ಈ ಎಲ್ಲ ಹಿನ್ನೆಲೆಯನ್ನು ಗಮನಿಸಿದರೆ, ಈ ಬಾರಿ ಯಶ್ ಅವರು ಸುದೀಪ್ ಅವರ ಟ್ವೀಟ್‌ಗೆ ಅತ್ಯಂತ ಗೌರವಪೂರ್ವಕವಾಗಿ ‘ಸರ್’ ಎಂದು ಸಂಬೋಧಿಸಿ ಉತ್ತರಿಸಿರುವುದು ಅಭಿಮಾನಿಗಳಿಂದ ಪ್ರಶಂಸೆಗೆ ಪಾತ್ರವಾಗಿದೆ. ವಿವಾದಕ್ಕೆ ಅವಕಾಶ ನೀಡದೆ, ಪರಸ್ಪರ ಗೌರವದ ಸಂದೇಶ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಕಾರಾತ್ಮಕ ಚರ್ಚೆಗೆ ಕಾರಣವಾಗಿದೆ.


