ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರಂಟ್ ಸದ್ಯ ಕೆಲಸ ಮಾಡೋದಿಲ್ಲ!

Share It

ಬೆಂಗಳೂರು/ಹಾಸನ,ಮೇ 19: ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಮೂಲಕ ವೈರಲ್ ಆದ ಬಳಿಕ ಅವರ ಮೇಲೆ ಲೈಂಗಿಕ ಅತ್ಯಾಚಾರ ಕೇಸ್‌ಗಳು ದಾಖಲಾಗಿವೆ. ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ಎಸ್‌ಐಟಿ ತನಿಖೆ ಮಾಡುತ್ತಿದ್ದರೂ, ಲೋಕಸಭಾ ಚುನಾವಣೆ ಮತದಾನ ದಿನ ಏಪ್ರಿಲ್ 26ರಂದು ನಾಪತ್ತೆಯಾದ ಸಂಸದ ಪ್ರಜ್ವಲ್ ರೇವಣ್ಣ ಇದುವರೆಗೂ ಪತ್ತೆಯಾಗಿಲ್ಲ. ವಿಚಾರಣೆಗೆ ಹಾಜರಾಗದ ಪ್ರಜ್ವಲ್ ವಿರುದ್ಧ ಈಗ ನ್ಯಾಯಾಲಯವು ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.

ಅರೆಸ್ಟ್ ವಾರಂಟ್‌ ಹಿಂದಿನ ರಹಸ್ಯವೇನು?
ವಿದೇಶದಲ್ಲಿ ತಲೆಮರೆಸಿಕೊಂಡು ಕಣ್ಣಾಮುಚ್ಚಾಲೆ ಆಟವಾಡುತ್ತಿರುವ ಪ್ರಜ್ವಲ್​ ರೇವಣ್ಣ ಅವರಿಗೆ ಕೋರ್ಟ್​ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಆದ್ರೆ, ಈ ಅರೆಸ್ಟ್ ವಾರಂಟ್​ನಿಂದ ಪ್ರಜ್ವಲ್​ ರೇವಣ್ಣಗೆ ಏನಾಗಲಿದೆ? ಎನ್ನುವುದನ್ನು ನೋಡುವುದಾದರೆ, ಎಸ್‌ಐಟಿ ಮನವಿ ಪುರಸ್ಕರಿಸಿ ನ್ಯಾಯಾಲಯವು ಅರೆಸ್ಟ್‌ ವಾರಂಟ್ ಜಾರಿ ಮಾಡಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ಮರಳಿದರಷ್ಟೇ ಬಂಧನ ಮಾಡಬಹುದಾಗಿದೆ.

ಅರೆಸ್ಟ್‌ ವಾರಂಟ್ ಆದೇಶದಿಂದ ಏಕಾಏಕಿ ರೆಡ್‌ ಕಾರ್ನರ್‌ ನೋಟಿಸ್ ಹೊರಡಿಸಲು ಸಾಧ್ಯವಾಗಲ್ಲ. ಒಂದು ವೇಳೆ ರೆಡ್‌ ಕಾರ್ನರ್ ನೋಟಿಸ್‌ ಹೊರಡಿಸಬೇಕು ಅಂದ್ರೆ ಮೊದಲು ಚಾರ್ಜ್‌ಶೀಟ್‌ ಸಲ್ಲಿಸಬೇಕು. ಚಾರ್ಜ್‌ಶೀಟ್‌ ಸಲ್ಲಿಸಿದ್ರೆ ಮಾತ್ರ ರೆಡ್‌ ಕಾರ್ನರ್ ನೋಟಿಸ್‌ ಹೊರಡಿಸಬಹುದು. ಇನ್ನು ವಿದೇಶದಲ್ಲಿದ್ದಾಗ ಈ ವಾರಂಟ್‌ ಮೇಲೆ ಬಂಧಿಸುವಂತಿಲ್ಲ. ಭಾರತದ ಗಡಿಯೊಳಗೆ ಬಂದರೆ ಪ್ರಜ್ವಲ್‌ ರೇವಣ್ಣನನ್ನು ಬಂಧಿಸಬಹುದು ಎಂದು ಎಸ್​ಐಟಿ ಹಿರಿಯ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.

ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್!
ಇನ್ನು ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿ ಈವರೆಗೆ 22 ದಿನಗಳು ಕಳೆದಿವೆ. ಎಸ್‌ಐಟಿ ವತಿಯಿಂದ ಲೈಂಗಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಕೇಸ್‌ ಕುರಿತು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದರೂ ಈವರೆಗೆ ಹಾಜರಾಗಿಲ್ಲ. ನಾನು ವಿದೇಶದಲ್ಲಿದ್ದೇನೆ, ವಿಚಾರಣೆಗೆ ಹಾಜರಾಗಲು ಒಂದು ವಾರದ ಕಾಲಾವಕಾಶ ಕೊಡಿ ಎಂದು ತಮ್ಮ ವಕೀಲರ ಮೂಲಕ ಎಸ್ಐಟಿಗೆ ಮನವಿ ಮಾಡಿದ್ದರು.

ಇದಾದ ನಂತರ, ನಾಲ್ಕೈದು ಬಾರಿ ಭಾರತಕ್ಕೆ ಮರಳಲು ಟಿಕೆಟ್ ಬುಕ್ ಮಾಡಿದ್ದರೂ, ಪುನಃ ಅದನ್ನು ರದ್ದುಗೊಳಿಸಿದ್ದಾರೆ. ಜೊತೆಗೆ, ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆಯಲು ಎಸ್‌ಐಟಿ ಬ್ಲೂ ಕಾರ್ನರ್ ನೋಟೀಸ್ ಹೊರಡಿಸಿದೆ. ಅದಕ್ಕೂ ಪ್ರಜ್ವಲ್ ಕ್ಯಾರೇ ಎಂದಿಲ್ಲ. ಇದೀಗ ಬಂದ ಮಾಹಿತಿ ಪ್ರಕಾರ ಜರ್ಮನಿಯಲ್ಲಿದ್ದ ಪ್ರಜ್ವಲ್ ಇದೀಗ ಅಲ್ಲಿಂದ ಲಂಡನ್​ಗೆ ತೆರಳಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಹಾಗಾಗಿ ಕೋರ್ಟ್ ಅರೆಸ್ಟ್ ವಾರಂಟ್ ಜಾರಿಯಿಂದ ಸದ್ಯ ಪ್ರಜ್ವಲ್ ರೇವಣ್ಣ ಯೂರೋಪ್ ನಲ್ಲಿ ಆರಾಮವಾಗಿ ಕಾಲ ಕಳೆಯಲು ಅವಕಾಶ ಸಿಕ್ಕಿದೆ!


Share It

You May Have Missed

You cannot copy content of this page