ರಾಜಕೀಯ ಸುದ್ದಿ

ಜಾಮೀನಿಗೆ ತಡೆ ಹಿನ್ನೆಲೆ: ಸುಪ್ರೀಂಕೋರ್ಟ್ ಮೊರೆ ಹೋದ ಕೇಜ್ರಿವಾಲ್

Share It

ನವದೆಹಲಿ : ಅಬಕಾರಿ ನೀತಿ ಪರಿಷ್ಕರಣೆಯಲ್ಲಿ ಅವ್ಯವಹಾರ ಆರೋಪ ಎದುರಿಸುತ್ತಿರುವ ದೆಹಲಿ ಸಿಎಂ-ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಜಾಮೀನು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ವಕೀಲರ ಮೂಲಕ ಜಾಮೀನು ಕೋರಿ ಅರವಿಂದ್ ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದಾರೆ.
ನಾಳೆ ಅರ್ಜಿ ವಿಚಾರಣೆ ಸಾಧ್ಯತೆ ಇದೆ. ಇತ್ತೀಚೆಗೆ ರೋಸ್ ಅವೆನ್ಯೂ ನ್ಯಾಯಾಲಯ ಕೇಜ್ರಿವಾಲ್​ಗೆ ಜಾಮೀನು ನೀಡಿತ್ತು. ಆದರೆ ರೋಸ್ ಅವೆನ್ಯೂ ಕೋರ್ಟ್ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಹೀಗಾಗಿ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಾಗಿದೆ.

ಕೇಜ್ರಿವಾಲ್ ಪರ ವಕೀಲರು ಸೋಮವಾರ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ದೆಹಲಿ ನ್ಯಾಯಾಲಯದಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್​ಗೆ ಜಾಮೀನು ನೀಡಲಾಗಿತ್ತು. ಆದರೆ ಅವರ ಜಾಮೀನನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ತನ್ನ ಆದೇಶ ನೀಡುವವರೆಗೆ ಜಾಮೀನಿಗೆ ತಡೆ ನೀಡಿತ್ತು.

ಶುಕ್ರವಾರ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಇಡಿ ಪರ ವಾದ ಮಂಡಿಸಿದ ಜನರಲ್ ಎಸ್‌ವಿ ರಾಜು, ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ‘ಲೋಪ್‌ಸೈಡ್’ ಮತ್ತು ‘ಏಕಪಕ್ಷೀಯ’ ಎಂದು ಬಣ್ಣಿಸಿದ್ದಾರೆ. ‘ದಾಖಲೆಗಳನ್ನು ಪರಿಗಣಿಸದೆಯೇ ನಿರ್ಧಾರ ಕೈಗೊಳ್ಳಲಾಗಿದೆ, ದಾಖಲೆಗಳನ್ನು ಪರಿಗಣಿಸದೆ ಅವು ಸಂಬಂಧಿತ ಅಥವಾ ಅಪ್ರಸ್ತುತ ಎಂದು ಹೇಗೆ ತೀರ್ಮಾನಿಸುತ್ತೀರಿ’ ಎಂದು ವಾದಿಸಿದ್ದರು.

ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ನ್ಯಾಯ್ ಬಿಂದು ಅವರು ಗುರುವಾರ ಕೇಜ್ರಿವಾಲ್‌ಗೆ 1 ಲಕ್ಷ ರೂ. ಜಾಮೀನು ಬಾಂಡ್ ಅನ್ನು ಒದಗಿಸಿ ಜಾಮೀನು ನೀಡಿದ್ದರು. ಜಾಮೀನು ಬಾಂಡ್ ಸಲ್ಲಿಸುವ ಪ್ರಕ್ರಿಯೆಯನ್ನು 48 ಗಂಟೆಗಳ ಕಾಲ ಮುಂದೂಡುವಂತೆ ಇಡಿ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.


Share It

You cannot copy content of this page