ಆನೇಕಲ್: ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದು, ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಆನೇಕಲ್‌ನಲ್ಲಿ ನಡೆದಿದೆ.
ಆನೇಕಲ್ ಹೊರವಲಯದ ರಾಗಿಹಳ್ಳಿ ಅರಣ್ಯ ಪ್ರದೇಶದಲ್ಲಿ ಆರೋಪಿ ಬಂಧಿಸಲು ಜಿಗಣಿ ಪೊಲೀಸರು ತೆರಳಿದಿದ್ದರು. ಈ ವೇಳೆ ಆರೋಪಿ ವೆಂಕಟರಾಜು ತುಕಡೆ ಪೊಲೀಸರ ಮೇಲೆ ಮುಗಿಬಿದ್ದು, ಹಲ್ಲೆಗೆ ಮುಂದಾಗಿದ್ದ. ಆಗ ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡು ಹಾರಿಸಿದ ಪೊಲೀಸರು, ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ವೆಂಕಟರಾಜು 2 ಕೊಲೆ ಸೇರಿ ಇತರ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತ ಕಾಡಿನ ಸಮೀಪ ಅಡಗಿರುವ ಮಾಹಿತಿ ಮೇರೆಗೆ ಪೊಲೀಸರು ತೆರಳಿದ್ದರು. ಗಾಂಜಾ ಮತ್ತಿನಲ್ಲಿದ್ದ ಆರೋಪಿ ಸೂಚನೆ ಕಡೆಗಣಿಸಿ ದಾಳಿಗೆ ಮುಂದಾಗಿದ್ದಾನೆ. ಈ ಸಂದರ್ಭ ಸ್ವರಕ್ಷಣೆಗೆ ಇನ್ಸ್ಪೆಕ್ಟರ್ ಮಂಜುನಾಥ್ ಗುಂಡು ಹಾರಿಸಿದ್ದಾರೆ.
ಆರೋಪಿಯನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಒಂದು ತಿಂಗಳ ಹಿಂದೆ ಆರೋಪಿ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಸ್ತಮಾನಹಳ್ಳಿ ಮುನೇಂದ್ರ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ.”ಕಳೆದ 4 ತಿಂಗಳಿಂದ ಬೇಕಾಗಿದ್ದ ರೌಡಿ ವೆಂಕಟರಾಜು ತುಕಡೆ ಹಿಡಿಯಲು ತಂಡ ರಚನೆ ಮಾಡಿ ಕಾರ್ಯಾಚರಣೆ ಮಾಡಲಾಗಿತ್ತು.
ವೆಂಕಟರಾಜು ತುಕಡೆ ಮೇಲೆ 4 ಬಾಕಿ ಉಳಿದ ವಾರೆಂಟ್‌ಗಳಿತ್ತು. 2 ಕೊಲೆ ಪ್ರಕರಣಗಳು, 4 ಹತ್ಯಾ ಪ್ರಯತ್ನ ಪ್ರಕರಣ ಇತ್ತು. ಹೀಗಾಗಿ ಈತನನ್ನು ಹಿಡಿಯುವ ಪ್ರಯತ್ನದಲ್ಲಿ ಪೊಲೀಸರ ತಂಡ ಬಂದು ಎಚ್ಚರಿಕೆ ನೀಡಿದಾಗ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಆ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಮಂಜುನಾಥ್ ಆತನ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್ ಹೇಳಿದ್ದಾರೆ.