ಸುದ್ದಿ

ನಾಳೆಯಿಂದ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಏರಿಕೆ!

Share It

ಬೆಂಗಳೂರು; ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಟೋರಿಕ್ಷಾ ಪ್ರಯಾಣದ ದರಗಳನ್ನು ಪರಿಷ್ಕರಿಸಿದ್ದು, ನಾಳೆ ಆಗಸ್ಟ್ 1 ರಿಂದಲೇ ನೂತನ ದರ ಜಾರಿಗೆ ಬರಲಿದೆ.

ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆಟೋರಿಕ್ಷಾ ಮೀಟರ್‌ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ಕನಿಷ್ಠ ದರ ಮೊದಲ 2 ಕಿ.ಮೀ.ಗೆ ತಲಾ 36 ರೂ. ನಿಗದಿಪಡಿಸಿದ್ದು, ಆಟೋರಿಕ್ಷಾದಲ್ಲಿ ಮೂವರು ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶವಿದೆ. ಕಾಯುವಿಕೆ ದರವು ಮೊದಲ 5 ನಿಮಿಷ ಉಚಿತವಾಗಿದೆ. ಅನಂತರ ಪ್ರತಿ 15 ನಿಮಿಷಕ್ಕೆ 10 ರೂ. ನಿಗದಿಪಡಿಸಲಾಗಿದೆ.

ಪ್ರಯಾಣಿಕರ ಲಗೇಜಿಗೆ 20 ಕೆ.ಜಿ.ವರೆಗೆ ಉಚಿತವಿದ್ದು, ನಂತರದ 20 ಕೆ.ಜಿ. ಲಗೇಜಿಗೆ 10 ರೂ. ನಿಗದಿಪಡಿಸಲಾಗಿದೆ. ಗರಿಷ್ಠ ಪ್ರಯಾಣಿಕರ 50 ಕೆ.ಜಿ. ಲಗೇಜಿಗೆ ಸೀಮಿತಗೊಳಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಸಾಮಾನ್ಯ ದರ ಜೊತೆಗೆ ಅರ್ಧದಷ್ಟು ಹೆಚ್ಚುವರಿಯಾಗಿ ಪಾವತಿಸಬೇಕು.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟಿರುವ ನಿಗದಿತ ಪರಿಷ್ಕೃತ ದರದ ಮೂಲ ಪಟ್ಟಿಯನ್ನು ಪ್ರತಿಯೊಂದು ಆಟೋರಿಕ್ಷಾದಲ್ಲಿ ಪ್ರಮುಖ ಸ್ಥಾನದಲ್ಲಿ ಪ್ರದರ್ಶಿಸಬೇಕು. ಪರಿಷ್ಕೃತ ದರ ಮೀಟರ್‌ನಲ್ಲಿ ಪ್ರದರ್ಶನವಾಗುವಂತೆ ಮೀಟರ್‌ಗಳನ್ನು ಅಟ್ಟೋಬರ್‌ 31ರೊಳಗಾಗಿ ಪುನಃ ಸ್ತಯಾಪನೆ ಮಾಡಿ ಮುದ್ರೆ ಹಾಕಿಸಿಕೊಳ್ಳಬೇಕು ಎಂದು ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.


Share It

You cannot copy content of this page