ಬೆಂಗಳೂರು: ಅಜೀಂ ಪ್ರೇಮ್ ಜೀ ಫೌಂಡೇಷನ್ ವತಿಯಿಂದ ಬೆಂಗಳೂರಲ್ಲಿ ಅಂಗಾಂಗ ಕಸಿಗಾಗಿ 1000 ಹಾಸಿಗೆ ಸಾಮರ್ಥ್ಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸಚಿವ ಸಂಪುಟ ಸಮ್ಮತಿ ಸೂಚಿಸಿದೆ.
ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ ಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ಪ್ಲಾಂಟ್ ಸಂಸ್ಥೆಗೆ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ 10 ಎಕರೆ ಜಮೀನನ್ನು ಎಲ್ಲಾ ಅಂಗಾಂಗ ಕಸಿ ಒಳಗೊಂಡ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಟರ್ಷಿಯರಿ ಆರೈಕೆ ಆಸ್ಪತ್ರೆ ನಿರ್ಮಾಣಕ್ಕೆ ಅಜೀಮ್ ಪ್ರೇಮ್ಜಿ ಫೌಂಡೇಷನ್ಗೆ 99 ವರ್ಷಗಳ ಅವಧಿಗೆ ಗುತ್ತಿಗೆ ನೀಡುವ ಬಗ್ಗೆ ಹಾಗೂ ಸಂಸ್ಥೆ ಎಮ್ಒಯು ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿದೆ.
ರಾಜ್ಯದಲ್ಲಿ 5,000ಕ್ಕೂ ಹೆಚ್ಚು ಮಂದಿ ಕಿಡ್ನಿ ಹಾಗೂ 1000 ಕ್ಕಿಂತ ಹೆಚ್ಚು ಲಿವರ್ ಕಸಿಗೆ ಕಾಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಜೀಂ ಪ್ರೇಮ್ ಜಿ ಫೌಂಡೇಶನ್ ಎಲ್ಲಾ ಅಂಗಾಂಗ ಕಸಿ ಒಳಗೊಂಡ ಉಚಿತ ಚಿಕಿತ್ಸೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಿದೆ. ಇದು 1000 ಹಾಸಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಲಿದ್ದು, 1000 ಕೋಟಿ ರೂ. ವೆಚ್ಚದಲ್ಲಿ ವಿಪ್ರೋದವರು ನಿರ್ಮಾಣ ಮಾಡಲಿದ್ದಾರೆ.
350 ಕೋಟಿ ರೂ. ನಿರ್ವಹಣಾ ವೆಚ್ಚವನ್ನು ಸಂಸ್ಥೆಯೇ ಭರಿಸಲಿದೆ. ಎಲ್ಲಾ ರೀತಿಯ ಅಂಗಾಂಗ ಕಸಿಯನ್ನು ಆಸ್ಪತ್ರೆಯಲ್ಲಿ ಮಾಡಲಾಗುವುದು. ಈ ಆಸ್ಪತ್ರೆಯಲ್ಲಿ ಎಲ್ಲಾ ಬಿಪಿಎಲ್ ಕಾರ್ಡ್ ದಾರರಿಗೆ 70% ರಷ್ಟು ಉಚಿತ ಸೇವೆ ನೀಡಲಾಗುತ್ತದೆ. ಉಳಿದ 30% ಹಾಸಿಗೆ ಕನಿಷ್ಠ ವೆಚ್ಚ ಇರಲಿದೆ. ಮೂರು ವರ್ಷದಲ್ಲಿ 300 ಹಾಸಿಗೆ ನಿರ್ಮಿಸಲಾಗುವುದು, ಉಳಿದಂತೆ ಐದು ವರ್ಷದಲ್ಲಿ 1000 ಬೆಡ್ ನಿರ್ಮಾಣ ಪೂರ್ಣವಾಗಲಿದೆ.

