ಲೋಕಾಯಕ್ತ ಬಲೆಗೆ ಬಿದ್ದ ಬಾಗೇಪಲ್ಲಿ ಕೃಷಿ ಅಧಿಕಾರಿ: ಬ್ಯಾಗಲ್ಲಿತ್ತು ಕಂತೆ ಕಂತೆ ಹಣ !
ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಕೃಷಿ ಅಧಿಕಾರಿ ಶಂಕರಯ್ಯ ಮೇಲೆ ಚಿಕ್ಕಬಳ್ಳಾಪುರ ಜೆಡಿ ಕಚೇರಿಯಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದು, 10 ಲಕ್ಷ ಲಂಚ ಪಡೆಯುವಾಗ ವಶಕ್ಕೆ ಪಡೆಯಲಾಗಿದೆ.
ಬಾಗೇಪಲ್ಲಿ ತಾಲೂಕು ಪಾತಾಪಲ್ಯ ಹೋಬಳಿಯ ಗುಮ್ಮಾಲಪಲ್ಲಿ ಜಲಾನಯನ ಪ್ರದೇಶ, ರಿವಾರ್ಡ್ ಯೋಜನೆಯಲ್ಲಿ ಚೆಕ್ ಡ್ಯಾಮ್ ಮತ್ತು ನಾಲಾಬದು ಯೋಜನೆಯ ಕಾಮಗಾರಿಗಳಲ್ಲಿ ಅಧಿಕಾರಿಯಾಗಿರುವ ಶಂಕರಯ್ಯ ಮತ್ತು ಅವರ ತಂಡ ಗುತ್ತಿಗೆದಾರರಿಂದ 15 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಗುತ್ತಿಗೆದಾರರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಇದರ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.
ದಾಳಿಯ ಸಂದರ್ಭದಲ್ಲಿ ಸುಮಾರು 10 ರಿಂದ 15 ಲಕ್ಷ ಹಣವನ್ನು ವಶಪಡಿಸಿಕೊಂಡಿರುವ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಸಂಪೂರ್ಣ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ದಾಳಿಯಲ್ಲಿ ಇನ್ನು ಎಷ್ಟು ಅಧಿಕಾರಿಗಳು ಶಾಮಿಲಾಗಿದ್ದಾರೆ ಎಂಬ ಮಾಹಿತಿಗಾಗಿ ತಡಕಾಡುತ್ತಿದ್ದು, ತನಿಖೆ ಮುಂದುವರಿದಿದೆ.


