ಬೆಂಗಳೂರು: ನಗರದ 42ನೇ ಎಸಿಎಂಎಂ ಕೋರ್ಟ್ ಮುಂದೆ ಇಂದು ಬೆಳಗ್ಗೆ ಬಿಜೆಪಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಜರಾದರು.
ನಂತರ ಸಿಎಂ-ಡಿಸಿಎಂಗೆ ಕೋರ್ಟ್ ಜಾಮೀನು ನೀಡಿತು. ಜಾಮೀನು ಬಾಂಡ್ ಗೆ ಸಹಿ ಹಾಕಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೋರ್ಟ್ ಹಾಲ್ ನಿಂದ ನಿರ್ಗಮಿಸಿದರು.
ಏನಿದು ಪ್ರಕರಣ?
ಕಳೆದ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಹಿಂದಿನ ರಾಜ್ಯದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಸ್ಥಾನ ಬರೋಬ್ಬರಿ 2500 ಕೋಟಿ ರೂಪಾಯಿಗೆ ಮತ್ತು ಮಂತ್ರಿಗಳ ಸ್ಥಾನ ತಲಾ 500 ಕೋಟಿ ರೂಪಾಯಿಗೆ ಮಾರಾಟವಾಗಿದ್ದವು ಎಂದು ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ತಮ್ಮ ಭಾಷಣದಲ್ಲಿ ಆರೋಪಿಸಿದ್ದರು. ಇದನ್ನು ಪ್ರಶ್ನಿಸಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಶವ್ ಪ್ರಸಾದ್ ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನಲ್ಲಿ ಕಾಂಗ್ರೆಸ್ ಪಕ್ಷದ ಈ ಮೂವರು ನಾಯಕರು ಆಧಾರ ರಹಿತ ಆರೋಪ ಮಾಡಿದ್ದಾರೆ ಎಂದು ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಆದರೆ ಪ್ರಕರಣದ ಇನ್ನೊಬ್ಬ ಆರೋಪಿಯಾದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜಾಮೀನು ಅರ್ಜಿ ಬಗ್ಗೆ ಕೋರ್ಟ್ ಮಧ್ಯಾಹ್ನ 3 ಗಂಟೆಗೆ ಆದೇಶ ಕಾಯ್ದಿರಿಸಿದೆ. ಇದರಿಂದ ರಾಹುಲ್ ಗಾಂಧಿ ಅವರಿಗೆ ಪ್ರಕರಣದಲ್ಲಿ ಜಾಮೀನು ಸಿಗುತ್ತದೆಯೇ? ಇಲ್ಲವೇ ಅರೆಸ್ಟ್ ವಾರಂಟ್ ಜಾರಿಯಾಗುತ್ತಾ? ಎಂಬ ಆತಂಕ ಕಾಂಗ್ರೆಸ್ ನಾಯಕರಿಗೆ ಕೊಂಚ ಆತಂಕ ತಂದೊಡ್ಡಿದೆ.
