ಅಪರಾಧ ಸುದ್ದಿ

ಬಜಾಜ್ ಸೇವಾಲಾಲ್ ಟ್ರಸ್ಟ್ ಆಸ್ತಿ ಎಪಿಎಂಸಿಗೆ: ಹೈಕೋರ್ಟ್ನಿಂದ ಹಸಿರು ನಿಶಾನೆ

Share It

ಬೆಂಗಳೂರು: ತಾಲೂಕಿನ ಮಾಗಡಿ ರಸ್ತೆಯಲ್ಲಿರುವ ಜಮ್ನಾಲಾಲ್ ಬಜಾಜ್ ಸೇವಾ ಟ್ರಸ್ಟ್ಗೆ ಸೇರಿದ ಭೂಮಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಂAಸಿ)ಯ “ಮೆಗಾ ಮಾರ್ಕೆಟ್” ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿದ್ದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.

ಸೇವಾ ಟ್ರಸ್ಟ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಮೇಲ್ಮನವಿ ತಿರಸ್ಕರಿಸಿದೆ. ಅಲ್ಲದೇ, ಏಕಸದಸ್ಯ ಪೀಠದ ತೀರ್ಪಿನಲ್ಲಿ ಯಾವುದೇ ಲೋಪಗಳಿಲ್ಲ ಎಂದು ಹೇಳಿದೆ.

ಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬಕ್ಕೆ ಟ್ರಸ್ಟ್ ಕಾಲಕಾಲಕ್ಕೆ ವಿವಿಧ ನ್ಯಾಯಾಲಯಗಳಿಂದ ಪಡೆದ ತಡೆಯಾಜ್ಞೆಗಳೇ ಪ್ರಮುಖ ಕಾರಣವಾಗಿದೆ. ಕಾನೂನು ಬದ್ಧ ಕಾಲಮಿತಿಯಲ್ಲೇ ಪ್ರಕ್ರಿಯೆ ನಡೆದಿದೆ. ?ಮಾರುಕಟ್ಟೆ ಯೋಜನೆಯನ್ನು ವೈಜ್ಞಾನಿಕವಾಗಿ ಜಾರಿಗೆ ತರಲು ಸರ್ಕಾರವು ‘ತುರ್ತು ಕಲಮು’ ಬಳಕೆ ಕಾನೂನು ಬದ್ಧವಾಗಿದೆ.

ಟ್ರಸ್ಟ್ ಈಗಾಗಲೇ ಪರಿಹಾರದ ಮೊತ್ತವನ್ನು ನಿರ್ಧರಿಸುವ ಸಭೆಗಳಲ್ಲಿ ಭಾಗವಹಿಸಿತ್ತು ಮತ್ತು ಸುಮಾರು ೨.೩೬ ಕೋಟಿ ರೂಪಾಯಿಗಳ ಪರಿಹಾರವನ್ನು ಪಡೆದುಕೊಂಡಿದೆ. ಹಣ ಪಡೆದ ಹತ್ತು ವರ್ಷಗಳ ನಂತರ ಅದನ್ನು ಹಿಂದಿರುಗಿಸಲು ಪ್ರಯತ್ನಿಸಿ ಭೂ ಸ್ವಾಧೀನವನ್ನು ಪ್ರಶ್ನಿಸುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ.

ಟ್ರಸ್ಟ್ ಹೆಚ್ಚುವರಿ ಭೂಮಿ ಹೊಂದಿದೆ ಎಂಬ ಕಾರಣಕ್ಕೆ ಸರ್ಕಾರ ಉಳಿದ ಪರಿಹಾರ ಹಣವನ್ನು ತಡೆಹಿಡಿದಿತ್ತು. ಟ್ರಸ್ಟ್ ಆ ಪ್ರಕರಣದಲ್ಲಿ ೨೦೨೨ರಲ್ಲಿ ಗೆಲುವು ಸಾಧಿಸಿದ್ದರೂ, ಅದು ಮೂಲ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.


Share It

You cannot copy content of this page