ಸಕಲೇಶಪುರ: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶಿರಾಢಿ ಘಾಟ್ ನಲ್ಲಿ ರಸ್ತೆಯಲ್ಲಿ ಮರಬಿದ್ದು, ರಾಷ್ಟೀಯ ಹೆದ್ದಾರಿ 75 ರ ಸಂಚಾರ ಬಂದ್ ಆಗಿದೆ.
ಭಾರಿ ಮಳೆಗೆ ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಮರಗಳು ಉರುಳಿವೆ. ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮತ್ತು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಮರಗಳನ್ನು ತೆರವುಗೋಲಿಸುವ ವಾಹನ ಮತ್ತು ಪರಿಕರಗಳನ್ನು ಹೊತ್ತ ವಾಹನ ಕೂಡ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದೆ.
ಸುಮಾರು ಐದಾರು ಕಿ.ಮೀ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸುಮಾರು ಮೂರು ಗಂಟೆಗೂ ಅಧಿಕ ಅವಧಿಯಲ್ಲಿ ನಿಂತಲ್ಲಿಯೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಣಿ ರಜೆಯ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ತೆರಳಿದವರು, ಸೋಮವಾರ ಬೆಳಗ್ಗೆಯೇ ರಸ್ತೆಯಲ್ಲಿ ಬೆಂಗಳೂರು ಕಡೆಗೆ ಹೊರಟಿದ್ದರು.
ಆದರೆ, ಮರಬಿದ್ದಿದ್ದರಿಂದ ಉಂಟಾಗಿರುವ ಸಂಚಾರ ದಟ್ಟಣೆಯಿಂದ ಸಮಯಕ್ಕೆ ಸರಿಯಾಗಿ ತೆರಳಲಾರದೆ ಪರದಾಟಿದ್ದಾರೆ. ಮರ ತೆರವು ಕಾರ್ಯಾಚಾರಣೆಗೆ ಸಿಬ್ಬಂದಿ ಸಿದ್ಧವಾಗಿದ್ದು, ಶೀಘ್ರವೇ ತೆರವು ಮಾಡಿ, ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.