ಬೆಂಗಳೂರು: ಚಿಟ್ ಫಂಡ್ನಲ್ಲಿ ತೆಗೆದುಕೊಂಡಿದ್ದ ಸಾಲದ ಹಣ ವಸೂತಿಗೆ ಬಂದಿದ್ದ ವ್ಯಕ್ತಿಯನ್ನು ಕೊಲೆ ಮಾಡಿ, ತುಂಡು ತುಂಡಾಗಿ ಕತ್ತರಿಸಿ ಬಿಸಾಕಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲಿ ಘಟನೆ ನಡೆದಿದ್ದು, ಚೀಟಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಗಲಾಟೆ ನಡೆದು, ಕೊಲೆ ನಡೆದಿದೆ ಎನ್ನಲಾಗಿದೆ. ಥಣಿಸಂದ್ರದ ನಿವಾಸಿಯಾದ ಶ್ರೀನಾಥ್ ಎಂಬ ವ್ಯಕ್ತಿ ಕೊಲೆಯಾಗಿದ್ದು, ಕೊಲೆ ಮಾಡಿದ ಮಾಧವ ರಾವ್ ನನ್ನು ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ.
ಮಾಧವರಾವ್ ಮತ್ತು ಶ್ರೀನಾಥ್ ಸುಮಾರು ಎರಡು ವರ್ಷಗಳಿಂದ ಪರಿಚಯಸ್ಥರಾಗಿದ್ದು, ಮಾಧವರಾವ್ ಬಳಿ ಶ್ರೀನಾಥ್ ಚೀಟಿ ಹಾಕಿದ್ದರು ಎನ್ನಲಾಗಿದೆ. ಮಾರ್ಗದರ್ಶಿ ಚಿಟ್ ಫಂಡ್ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಾಥ್ ಹಣ ಕೇಳಲು ಮಾಧವರಾವ್ ಮನೆಗೆ ಹೋಗಿದ್ದರು. ಅನಂತರ ವಾಪಸ್ ಬರದೆ ನಾಪತ್ತೆಯಾಗಿದ್ದರು ಎನ್ನಲಾಗಿದೆ.
ಶ್ರೀನಾಥ್ ಪತ್ನಿಯಿಂದ ನಾಪತ್ತೆ ದೂರು: ಶ್ರೀನಾಥ್ ಫೋನ್ ಕೂಡ ಸ್ವಿಚ್ ಆಪ್ ಮಾಡಿಕೊಂಡು, ಮನೆಗೆ ಬರದಿರುವುದರಿಂದ ಗಾಬರಿಗೊಂಡ ಆತನ ಪತ್ನಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು, ಆತನ ಮೊಬೈಲ್ ಟ್ರೇಸ್ ಮಾಡಿದಾಗ ಆತನ ಕೊನೆಯದಾಗಿ ಮಾಧವರಾವ್ ಮನೆಗೆ ತೆರಳಿರುವುದು ಕಂಡುಬಂದಿತ್ತು. ಮಾಧವರಾವ್ ಸಂಪರ್ಕಕ್ಕೆ ಪ್ರಯತ್ನ ಮಾಡಿದಾಗ ಆತನ ಮೊಬೈಲ್ ಕೂಡ, ಶ್ರೀನಾಥ್ ಆತನ ಮನೆಗೆ ಬಂದಿದ್ದ ಸಂದರ್ಭದಲ್ಲೇ ಸ್ವಿಚ್ ಆಫ್ ಆಗಿತ್ತು. ಈ ಘಟನೆ ಬೆನ್ನತ್ತಿದ್ದ ಪೊಲೀಸರಿಗೆ ಕುತೂಹಲಕರ ಸಂಗತಿಗಳು ಗೊತ್ತಾಗಿವೆ.
ತುಂಡು-ತುಂಡಾಗಿ ಕತ್ತರಿಸಿದ್ದ ಆರೋಪಿ: ಹಣ ಕೇಳಲು ಮಾಧವ ರಾವ್ ಮನೆಗೆ ಶ್ರೀನಾಥ್ ಬಂದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅನಂತರ ಮಾಧವ ರಾವ್ ಮಾತ್ರವೇ ತನ್ನ ಬೈಕ್ ಮೇಲೆ ಎರಡು ಪ್ಲಾಸ್ಟಿಕ್ ಚೀಲ ಇಟ್ಟುಕೊಂಡು ಹೋಗುತ್ತಿರುವುದು ಕಂಡುಬಂದಿತ್ತು. ಇದೆಲ್ಲದರ ಬೆನ್ನತ್ತಿ ವಿಚಾರಣೆ ನಡೆಸಿದಾಗ, ಮನೆಗೆ ಬಂದ ಶ್ರೀನಾಥ್ ತಲೆಗೆ ಜಾಕ್ ರಾಡ್ನಿಂದ ಹೊಡೆದಿದ್ದ ಮಾಧವರಾವ್, ನಂತರ ದೇಹವನ್ನು ತುಂಡು ತುಂಡಾಗಿ ಕತ್ತಿರಿಸಿ, ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಬೈಕ್ನಲ್ಲಿ ಮೋರಿಗೆ ಬಿಸಾಕಿದ್ದ ಎನ್ನಲಾಗಿದೆ.
ಬೆಳತ್ತೂರು ಬಳಿಯ ಮೋರಿಯಲ್ಲಿ ಹುಡುಕಾಟ : ಶ್ರೀನಾಥ್ ದೇಹವನ್ನು ತುಂಡುಗಳನ್ನು ಚೀಲದಲ್ಲಿ ತಂದು ಬೆಳತ್ತೂರು ಬಳಿಯ ಮೋರಿಯಲ್ಲಿ ಮಾಧವರಾವ್ ಎಸದಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಆ ಚೀಲಗಳ ಪರಿಶೀಲನೆಗೆ ಪೊಲೀಸರು ಮೂರು ದಿನಗಳಿಂದ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸುಮಾರು ಐದು ಕಿ.ಮೀ ವ್ಯಾಪ್ತಿಯ ಮೋರಿಯಲ್ಲಿ ಹುಡುಕಾಟ ನಡೆಯುತ್ತಿದೆ.
ಅಕ್ರಮ ಸಂಬAಧವೂ ಕಾರಣ?: ಮಾಧವರಾವ್ನನ್ನು ಪೊಲೀಸರು ಬಂಧಿಸಿದ್ದು, ಕೊಲೆಗೆ ಆತನ ಪತ್ನಿಯೊಂದಿಗೆ ಶ್ರೀನಾಥ್ಗಿದ್ದ ಅಕ್ರಮ ಸಂಬಂಧವೂ ಕಾರಣ ಎಂಬ ಸತ್ಯ ಬಯಲಾಗಿದೆ. ಹಣಕಾಸಿನ ವ್ಯವಹಾರದ ಜತೆಗೆ, ಶ್ರೀನಾಥ್ ಆತನ ಪತ್ನಿ ಜತೆ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಹಣ ಕೇಳುವ ನೆಪದಲ್ಲಿ ಆಗಾಗ ಮನೆಗೆ ಬರುತ್ತಿದ್ದ ಶ್ರೀನಾಥ್, ಆತನ ಪತ್ನಿ ಜತೆ ಸಂಬಂಧದ ಕಾರಣಕ್ಕೆ ಕೊನೆ ನಡೆದಿದೆ ಎಂದು ಹೇಳಲಾಗುತ್ತಿದೆ.

