ಬೆಂಗಳೂರು: ಕಸ ಪಾರ್ಕಿಂಗ್ ಶುಲ್ಕ ವಿಧಿಸುವ ಮೂಲಕ ಬೆಂಗಳೂರು ಜನರಿಗೆ ಶಾಕ್ ಕೊಟ್ಟಿದ್ದ ಬಿಬಿಎಂಪಿ ಇದೀಗ ಈಜುಕೊಳ ಪ್ರವೇಶ ದರ ಏರಿಕೆ ಬಿಸಿ ಮುಟ್ಟಿಸಲು ಮುಂದಾಗಿದೆ.
ಹೌದು, ಬಿಬಿಎಂಪಿಯ ಈಜುಕೊಳಗಳಲ್ಲಿ ವಯಸ್ಕರು ಹಾಗೂ ಮಕ್ಕಳಿಗೆ ಪ್ರತ್ಯೇಕ ದರ ನಿಗದಿಮಾಡಲಾಗಿದೆ. ಆದರೆ, ಇದೀಗ ಹಲವೆಡೆ ಮಕ್ಕಳು ಮತ್ತು ದೊಡ್ಡವರಿಗೆ ಒಂದೇ ರೀತಿಯ ದರದಲ್ಲಿ ಟಿಕೆಟ್ ಕೊಡುತ್ತಿರುವುದು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಬೇಸಿಗೆ ಅಂತ ಈಜುಕೊಳದತ್ತ ತೆರಳುತ್ತಿದ್ದ ಮಕ್ಕಳಿಗೆ ಇದೀಗ ಪ್ರವೇಶ ದರ ಏರಿಕೆಯ ಬಿಸಿ ತಟ್ಟುತ್ತಿದೆ.
ಬೇಸಿಗೆ ರಜೆ ಆರಂಭವಾಗಿರುವುದರಿಂದ ತಣ್ಣಗೆ ಕೆಲಕಾಲ ಈಜುಕೊಳದಲ್ಲಿ ಈಜಾಡಿ ಬರೋಣ ಅಂತ ಹೊರಡುವ ಮಕ್ಕಳಿಗೆ ಇದೀಗ ಪ್ರವೇಶ ದರ ಏರಿಕೆಯ ಬಿಸಿ ತಟ್ಟುತ್ತಿದೆ. ಸದ್ಯ ಪಾಲಿಕೆಯ ಈಜುಕೊಳಗಳಲ್ಲಿ 10 ವರ್ಷದ ಒಳಗಿನ ಮಕ್ಕಳಿಗೆ 35 ರೂಪಾಯಿ ಹಾಗೂ ವಯಸ್ಕರಿಗೆ ಪ್ರವೇಶ ದರ ಅಂತ 50 ರೂಪಾಯಿ ನಿಗದಿ ಮಾಡಿ ಬೋರ್ಡ್ ಕೂಡ ಹಾಕಲಾಗಿದೆ. ಆದರೆ, ಇದೀಗ ಮಕ್ಕಳಿಗೂ ದೊಡ್ಡವರಷ್ಟೇ ಹಣ ಪಡೆಯುತ್ತಿರುವುದು ಪೋಷಕರ ಸಿಟ್ಟಿಗೆ ಕಾರಣವಾಗಿದೆ.
ಇನ್ನು, ಸಣ್ಣವರಿಗೆ ಮತ್ತು ದೊಡ್ಡವರಿಗೆ ಈಜುಕೊಳದಲ್ಲಿ ಈ ಮೊದಲು ಕಡಿಮೆ ದರ ಇತ್ತು. ಅರ್ಧದಿಂದ ಒಂದು ಗಂಟೆವರೆಗಿನ ಸಮಯಕ್ಕೆ ಈಜುಕೊಳಕ್ಕೆ ನಿಗದಿಪಡಿಸಿದ್ದ ದರವನ್ನು ಇದೀಗ ಬೇಕಾಬಿಟ್ಟಿಯಾಗಿ ಹೆಚ್ಚಿಸಲಾಗಿದೆ. ಇತ್ತ ಬಿಬಿಎಂಪಿಯ ವ್ಯಾಪ್ತಿಯಲ್ಲಿ ಸುಮಾರು 13 ಈಜುಕೊಳಗಳಿದ್ದು ಬಹುತೇಕ ಈಜುಕೊಳಗಳಲ್ಲಿ ಬೋರ್ಡ್ನಲ್ಲಿ ಬರೆದಿರುವ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬಿಎಂಟಿಸಿ ಎಸಿ ಎಲೆಕ್ಟ್ರಿಕ್ ಬಸ್ ಸಂಚಾರ; ಬೇಸಿಗೆ ರಜೆ ಇರುವುದರಿಂದ ಈಜುಕೊಳಕ್ಕೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಬಂಡವಾಳ ಮಾಡಿಕೊಂಡ ಪಾಲಿಕೆ ಸಿಬ್ಬಂದಿ ದುಪ್ಪಟ್ಟು ಹಣ ಪಡೆಯುತ್ತಿರವುದು ಬೇಸಿಗೆ ರಜೆ ಮಜಾ ಅನುಭವಿಸಬೇಕಿದ್ದ ಮಕ್ಕಳಿಗೆ ನಿರಾಸೆ ತಂದಿಟ್ಟಿದೆ.
ಸದ್ಯ ಮಹಾಲಕ್ಷ್ಮೀ ಬಡಾವಣೆ, ವಿಜಯನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಈಜುಕೊಳಕ್ಕೆ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೇಸಿಗೆ ರಜೆ ಇರುವುದರಿಂದ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಈಜುಕೊಳಗಳತ್ತ ಆಕರ್ಷಿತರಾಗುತ್ತಿದ್ದಾರೆ. ಆದರೆ, ಕೇವಲ 40 ನಿಮಿಷ ಸಮಯಕ್ಕೆ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವುದು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ.
ಇತ್ತ ದುಪ್ಪಟ್ಟು ಹಣ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ ಅಂತ ಎಚ್ಚರಿಸಿದ್ದ ಪಾಲಿಕೆ, ಇದೀಗ ಬೇಕಾಬಿಟ್ಟಿ ದರ ವಸೂಲಿ ಮಾಡುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದು, ಸದ್ಯ ಬಿಬಿಎಂಪಿ ಇನ್ನಾದರೂ ಈ ಬಗ್ಗೆ ಎಚ್ಚೆತ್ತುಕೊಳ್ಳುತ್ತಾ? ಎಂದು ಸಾರ್ವಜನಿಕರು ಕೇಳುವಂತಾಗಿದೆ.