ಶಿವಮೊಗ್ಗ: ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣದಲ್ಲಿ ಅಪರೂಪದ ಕಡರಿಯೊಂದು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಕರಡಿಯನ್ನು ರಕ್ಷಣೆ ಮಾಡಿದ್ದು, ಮೃಗಾಲಯಕ್ಕೆ ಹಸ್ತಾಂತರ ಮಾಡಿದ್ದಾರೆ.
ಸುಮಾರು ಎಂಟು ವರ್ಷದ ಹೆಣ್ಣು ಕರಡಿ ಇದಾಗಿದ್ದು, ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ಮೊದಲು 24 ಗಂಟೆಗಳಲ್ಲಿ ಸುಮಾರು 50 ಕಿ.ಮೀ. ದೂರ ಕ್ರಮಿಸಿದೆ ಎಂದು ಪತ್ತೆಹಚ್ಚಲಾಗಿದೆ. ಈ ಕರಡಿ ಮಾರ್ಚ್ 27 ರಂದು ಹೊಸಪೇಟೆಯ ತೋರಣಗಲ್ಲು ಸಮೀಪ ಪತ್ತೆಯಾಗಿತ್ತು. GPS ಟ್ರ್ಯಾಕರ್ ಅಳವಡಿಸಿ, ಅದನ್ನು ಭದ್ರಾ ಅರಣ್ಯ ಪ್ರದೇಶಕ್ಕೆ ಬಿಡಲಾಗಿತ್ತು. ಅಲ್ಲಿಂದ ಕೇವಲ 24 ಗಂಟೆಗಳಲ್ಲಿ ಸುಮಾರು 50 ಕಿ.ಮೀ.ಕ್ರಮಿಸಿದ ಕರಡಿ ಜನವಸತಿ ಪ್ರದೇಶದ ಕಡೆಗೆ ಬಂದಿದೆ.
ವಿಮಾನ ನಿಲ್ದಾಣಕ್ಕೆ ಎಂಟ್ರಿಯಾಗುವ ಮೊದಲು ಕರಡಿ, ವಿನಾಯಕನಗರ ಮತ್ತು ಜ್ಯೋತಿ ನಗರದ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ವಿಮಾನ ನಿಲ್ದಾಣ ಗೋಡೆ ಹತ್ತುವ ಸಂದರ್ಭದಲ್ಲಿ ಉಂಬ್ಲೆಬೈಲು ಮತ್ತು ಲಕ್ಕವಳ್ಳಿ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕರಡಿಯನ್ನು ರಕ್ಷಿಸಿದ್ದಾರೆ. ಇದೀಗ ಶಿವಮೊಗ್ಗದ ಮೃಗಾಲಯದಲ್ಲಿ ಇರಿಸಲಾಗಿದ್ದು, ವಿವಿಧ ವೈದ್ಯಕೀಯ ಪರೀಕ್ಷೆಗಳ ನಂತರ ಭದ್ರಾ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

