ಬೆಂಗಳೂರು: ಏಪ್ರಿಲ್ 26ಕ್ಕೆ ಊರು ಬಿಟ್ಟ ಪ್ರಜ್ವಲ್ ರೇವಣ್ಣಗೆ ಮೇ 27ಕ್ಕೆ ಇದ್ದಕ್ಕಿಂದ್ದಂತೆ ಎಸ್‌ಐಟಿ ಮುಂದೆ ಹೋಗಿ ವಿಚಾರಣೆಗೆ ಹಾಜರಾಗಬೇಕು ಅನಿಸುವಷ್ಟು ಜ್ಞಾನೋದಯ ಆಗಿದ್ದು ಯಾಕೆ?
ಹೇಗಾದರೂ ಬಂಧನದಿಂದ ತಪ್ಪಿಸಿಕೊಳ್ಳಬೇಕು ಎಂಬುದೇ ಪ್ರಜ್ವಲ್ ರೇವಣ್ಣ ಪ್ಲಾನ್ ಆಗಿತ್ತು. ಅದಕ್ಕಾಗಿಯೇ ಅವರು ವಿದೇಶಕ್ಕೆ ಹೋಗಿದ್ದು, ಅಲ್ಲಿದ್ದುಕೊಂಡೇ ಆಟವಾಡಿಸುವ ಅನೇಕ ಯೋಜನೆಗಳು ಪ್ರಜ್ವಲ್ ಸುತ್ತಮುತ್ತಲೂ ಸೃಷ್ಟಿಯಾಗಿದ್ದವು. ಇದೀಗ ಪ್ರಜ್ವಲ್ ಮೇ. 31 ಕ್ಕೆ ಬಂದು ಎಸ್‌ಐಟಿ ಮುಂದೆ ಶರಣಾಗುತ್ತೇನೆ ಎಂದಿದ್ದಾರೆ. ಇದರ ಹಿಂದಿನ ಗುಟ್ಟೇನು ಎಂಬುದೇ ಈಗಿನ ಮಿಲಿಯನ್ ಡಾಲರ್ ಪ್ರಶ್ನೆ.
ಪ್ರಜ್ವಲ್ ತನ್ನ ಕುಟುಂಬದ ಕರೆಗೆ ಓಗೊಟ್ಟು ವಾಪಸ್ ಬರಲು ಒಪ್ಪಿಕೊಂಡ್ರಾ? ಅನ್ನೋ ಅನುಮಾನ ಎಲ್ಲರದ್ದು. ಆದ್ರೆ, ಬರೋ ಹಾಗಿದ್ರೆ ಅಪ್ಪನನ್ನು ಅರೆಸ್ಟ್ ಮಾಡುತ್ತಿದ್ದಂತೆ, ಎಸ್‌ಐಟಿ ಮುಂದೆ ಬಂದು ಶರಣಾಗಿ ವಿಚಾರಣೆಗೆ ಒಡ್ಡಿಕೊಳ್ಳುತ್ತಿದ್ದರು. ರೇವಣ್ಣ ನನ್ನು ಅರೆಸ್ಟ್ ಮಾಡಿ, ಜೈಲಿಗೆ ಕಳುಹಿಸಿದ್ದರೂ, ಬರಬೇಕೆಂದು ತೀರ್ಮಾನ ಮಾಡಿರಲಿಲ್ಲ.
ಇನ್ನು ಮಾಜಿ ಸಿಎಂ ಕುಮಾರಸ್ವಾಮಿ, ಕೈಮುಗಿದು ಬೇಡಿಕೊಂಡು ಬಂದು ಬಿಡು ಕಂದಾ ಎಂದಾಗಲೂ ಬರಬೇಕೆಂದು ಮನಸ್ಸು ಮಾಡಲಿಲ್ಲ. ಇಷ್ಟೆಲ್ಲ ಆದರೂ, ತಾತನ ಮಾತಿಗೆ ಬೆಲೆ ಕೊಟ್ಟು ಬಂದುಬಿಟ್ರೆ ಎಂದುಕೊಂಡರೆ, ತಾತ ಪತ್ರ ಬರೆದು ಅದಾಗಲೇ ನಾಲ್ಕು ದಿನವಾಗುತ್ತಲೇ ಬಂತು. ನಾಲ್ಕು ದಿನದಲ್ಲಿಲ್ಲದ ತಾತನ ಮೇಲಿನ ಅಕ್ಕರೆ, ಈಗ ಉಕ್ಕಿ ಬರಲು ಕಾರಣವೇನು?
ಬ್ಲೂ ಕಾರ್ನರ್ ನೊಟೀಸ್‌ಗೂ ಬಗ್ಗಲಿಲ್ಲ, ಆದರೆ, ವಿದೇಶಾಂಗ ಸಚಿವಾಲಯಕ್ಕೆ ಎಸ್‌ಐಟಿ ಮತ್ತು ಸಿಎಂ ಬರೆದ ಪತ್ರ ಪ್ರಜ್ವಲ್‌ಗೆ ಪುಕುಪುಕು ಎನ್ನುವಂತೆ ಮಾಡಿತ್ತು. ಕೇಂದ್ರ ಸರಕಾರ ರಾಜ್ಯ ಸರಕಾರದ ಪತ್ರವನ್ನು ಪದೇಪದೆ ನಿರಾಕರಿಸಲು ಸಾಧ್ಯವಿಲ್ಲ. ಇದು ಒಕ್ಕೂಟ ವ್ಯವಸ್ಥೆಗೆ ಅಪಚಾರ ಮಾಡಿದಂತೆ, ಅದನ್ನೇ ಇಟ್ಟುಕೊಂಡು ಕಾಂಗ್ರೆಸ್ ಬಿಜೆಪಿಯನ್ನು ಹಣಿಯಲು ಆರಂಭಿಸಿತ್ತು.
ಪ್ರಜ್ವಲ್‌ಗಾಗಿ ಕಾಂಗ್ರೆಸ್ ಕೈಗೆ ಇಂತಹದ್ದೊಂದು ಅಸ್ತ್ರ ಕೊಡಲು ಬಿಜೆಪಿ ಸಿದ್ಧವಿರಲಿಲ್ಲ, ಹೀಗಾಗಿಯೇ ವಿದೇಶಾಂಗ ಸಚಿವಾಲಯದಿಂದ ನೊಟೀಸ್‌ವೊಂದು ಪ್ರಜ್ವಲ್‌ಗೆ ಹೋಯ್ತು. ಅದರಲ್ಲಿ ಹತ್ತು ದಿನದಲ್ಲಿ ಉತ್ತರ ಕೊಡಬೇಕೆಂದು ಬರೆದಿತ್ತು. ಒಂದು ವೇಳೆ ಹತ್ತು ದಿನದಲ್ಲಿ ಈ ನೊಟೀಸ್‌ಗೆ ಉತ್ತರಿಸಿ ವಾಪಸ್ ಬರದಿದ್ದರೆ, ಪಾರ್ಸ್ ಪೋರ್ಟ್ ರದ್ಧುಪಡಿಸುವ ಪ್ರಕ್ರಿಯೆಗೆ ಚಾಲನೆ ಸಿಗುತ್ತಿತ್ತು.
ಪಾಸ್‌ಪೋರ್ಟ್ ಇಲ್ಲದೆ ವಿದೇಶದಲ್ಲಿ ಒಂದು ಕ್ಷಣ ಇರಲು ಸಾಧ್ಯವಿಲ್ಲ, ಅಲ್ಲಿನ ಪೊಲೀಸರೇ ಬಂಧಿಸಿ, ಸಾಧ್ಯವಾದರೆ ಭಾರತಕ್ಕೆ ಹಸ್ತಾಂತರ ಮಾಡುತ್ತಾರೆ. ಹೀಗೆ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಮರ್ಯಾದೆ ಕಳೆದುಕೊಳ್ಳುವುದು ಬೇಡ ಎಂದು ಪ್ರಜ್ವಲ್ ವಾಪಸ್ ಬರಲು ಯೋಚಿಸಿದರು. ಜತೆಗೆ ಪ್ರಕರಣವನ್ನು ರಾಜಕೀಯ ಷಡ್ಯಂತ್ರ ಎಂದು ಒಂದಷ್ಟು ಹೋರಾಟ ಮಾಡಬಹುದು. ಆಗುವ ಡ್ಯಾಮೇಜ್ ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಶರಣಾಗುವ ಯೋಜನೆ ಮಾಡಿದ್ದಾರೆ.
ಏನೇ ಇರಲಿ, ನ್ಯಾಯದ ಮುಂದೆ ಶರಣಾಗಿ ವಿಚಾರಣೆ ಎದುರಿಸುವುದು ಆರೋಪಿಯಾದ ಪ್ರಜ್ವಲ್ ರೇವಣ್ಣ ಅವರಿಗೆ ಒಳ್ಳೆಯದು. ಇಲ್ಲವಾದಲ್ಲಿ, ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗುತ್ತಾ ಸಾಗುತ್ತದೆ. ಅಷ್ಟಕ್ಕೂ ಈ ಕಾನೂನು ಎನ್ನುವುದು ಗಟ್ಟಿಯಾಗಿ ಕೆಲಸ ಮಾಡುವುದು ರಾಜಕೀಯ ಜಿದ್ದಾಜಿದ್ದಿ ಇದ್ದಾಗ ಮಾತ್ರ. ಇಲ್ಲವಾದಲ್ಲಿ, ಇಷ್ಟೊತ್ತಿಗಾಗಲೇ ಪ್ರಕರಣ ಹಳ್ಳ ಹಿಡಿದಿರುತ್ತಿತ್ತ. ಅದರಲ್ಲಿ ನೊಂದ ಮಹಿಳೆಯರನ್ನು ಕೇಳುವವರೇ ಇರುತ್ತಿರಲಿಲ್ಲ, ಬಹುತೇಕ ಈಗಲೂ ಅವರ ಕಣ್ಣೀರ ಗೋಳು ಕೇಳುವವರು ಕಡಿಮೆಯೇ ಇದ್ದಾರೆ. ಇದು ವ್ಯವಸ್ಥೆಯ ವೈಫಲ್ಯ.