ಗಂಗಾವತಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಕೃತ್ಯವನ್ನು ಖಂಡಿಸಿ ಗಂಗಾವತಿ ಗಾಂಧಿ ವೃತ್ತದಲ್ಲಿ ಗ್ರಾಮೀಣ ಬ್ಲಾಕ್, ನಗರ, ಯುವ ಕಾಂಗ್ರೆಸ್ ಘಟಕಗಳ ವತಿಯಿಂದ ಮೃತರ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ದಾಳಿಯಲ್ಲಿ ಕನ್ನಡಿಗರಾದ ಮಂಜುನಾಥ್ ರಾವ್, ಮಧುಸೂಧನ್ ರಾವ್, ಭರತ್ ಭೂಷಣ್ ಜೊತೆಗೆ 26 ಜನರು ಮೃತರಾಗಿದ್ದು, ಉಗ್ರರಿಗೆ ಶಿಕ್ಷೆ ಯಾಗಲಿ ಕಾಶ್ಮೀರದಲ್ಲಿ ಶಾಂತಿ ನೆಲೆಸಲಿ ಎಂದು ಘೋಷಣೆ ಹಾಕುವುದರ ಜೊತೆಗೆ ಅವಮಾನೀಯ ಘಟನೆಯನ್ನು ತೀವ್ರವಾಗಿ ಖಂಡಿಸಲಾಯಿತು.
ಉಗ್ರರು ಪ್ರವಾಸಿಗರ ಮೇಲೆ ನಡೆಸಿದ ದಾಳಿ ನಮ್ಮ ದೇಶಕ್ಕೆ ಕಪ್ಪು ಚುಕ್ಕೆಯಾಗಿದ್ದು ಇಂತಹ ಪೈಶಾಚಿಕ ಕೃತ್ಯ ನಡೆದಿರುವುದು ವಿಷಾದನೀಯ ಸಂಗತಿ, ಈ ತೆರನಾದ ಘಟನೆಗಳು ಮತ್ತೊಮ್ಮೆ ಮರುಕಳಿಸಬಾರದು ಉಗ್ರರಿಗೆ ಶಿಕ್ಷೆ ಆಗಲಿ ಕಾಶ್ಮೀರದಲ್ಲಿ ಶಾಂತಿ ನೆಲೆಸಲಿ ಎಂದು ನಾಯಕರು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸರ್ಕಾರ ಕನ್ನಡಿಗರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಂಡಿದೆ ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಕ್ರಮ ಸ್ವಾಗತಾರ್ಹ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಮುತುವರ್ಜಿ ವಹಿಸಿ ವಿಶೇಷ ವಿಮಾನದಲ್ಲಿ ತೆರಳಿ ಕನ್ನಡಿಗರ ರಕ್ಷಣೆ ಮಾಡಿರುವುದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಗಾಯಳುಗಳಿಗೆ ಧೈರ್ಯ ಹೇಳಿ ಅವರ ಜತೆಗೆ ಬಂದಿರುವುದು ಶ್ಲಾಘನೀಯ. ಮೃತರ ಕುಟುಂಬದ ಜತೆ ಕಾಂಗ್ರೆಸ್ ಸದಾ ಇರುತ್ತೆ ಎನ್ನುವ ಭರವಸೆಯನ್ನು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಡಿಸಿಸಿ ಉಪಾಧ್ಯಕ್ಷ ನೆಹರು ಸಾಬ್ , ನಗರಸಭೆ ಸದಸ್ಯ ಮನೋಹರ್ ಸ್ವಾಮಿ ಹಿರೇಮಠ, ನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜುಬೇರ್, ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಜೆ. ರವಿ ನಾಯಕ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್. ಬಾಬರ್, ಆರಾಧನಾ ಸಮಿತಿ ಸದಸ್ಯ ವಿಶ್ವನಾಥ್ ಮಾಲಿ ಪಾಟೀಲ್, ಗ್ಯಾರೆಂಟಿ ತಾಲೂಕು ಅಧ್ಯಕ್ಷ ವೆಂಕಟೇಶ್ ಬಾಬು, ಮುಖಂಡರಾದ ಇಲಿಯಾಸ್ ಬಾಬಾ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸನ್ನಿಕ ಭಾಷ, ಬಸಾಪಟ್ಟಣ ಗ್ರಾ. ಪಂ. ಅಧ್ಯಕ್ಷ ಅಂಜನಿ ನಾಯಕ್, ನಾಮ ನಿರ್ದೇಶನ ಸದಸ್ಯ ಆನಂದ ಹಸಲ್ಕರ್, ಮಲ್ಲಿಕಾರ್ಜುನ ತಟ್ಟಿ, ಅಯೂಬ್ ಅಲಿ, ರಾಚಪ್ಪ, ರಹಮತ್ ಸಂಪಂಗಿ, ನೀಲಕಂಠಪ್ಪ ಹೊಸಳ್ಳಿ, ಹಮೀದ್ ಮುಲ್ಲಾ, ರಾಮು ಕಿರಿಕಿರಿ, ವೀರನಗೌಡ, ಹೊನ್ನೂರ್, ಮಾರೇಶ್, ಹನೀಫ್, ಹುಸೇನ್ ಪೀರಾ,ಗಫುರ್, ಹೊನ್ನೂರಪ್ಪ ನಾಯಕ್, ಸುರೇಶ್, ಬಸವರಾಜ್ ಉಪಸ್ಥಿತರಿದ್ದರು.