ಬೆಂಗಳೂರು: ನಗರ ವಿಶ್ವವಿದ್ಯಾನಿಲಯದ ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ರಾಜಾಜಿ ಹಾಲ್ ನಲ್ಲಿ ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಿಸಿಯು ಪ್ರಭಾರ ಕುಲಪತಿ ಪ್ರೊ. ಕೆ.ಆರ್.ಜಲಜಾ, ಕುಲಸಚಿವ (ಮೌಲ್ಯಮಾಪನ) ಪ್ರೊ. ರಮೇಶ್ ಬಿ. ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಬಸವಣ್ಣನವರಿಗೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಮತ್ತು ಕುಲಸಚಿವರು ಹನ್ನೆರಡನೇ ಶತಮಾನದಲ್ಲಿ ಜಗತ್ತಿಗೆ ಸಮಾನತೆ ಸಂದೇಶ ಸಾರಿದ ಬಸವೇಶ್ವರರ ತತ್ವ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟರು.
ಜಾತಿ ತಾರತಮ್ಯ, ಲಿಂಗ ತಾರತಮ್ಯ ಮತ್ತು ಬಡವ-ಬಲ್ಲಿದ ಬೇಧಭಾವ ತೊಡೆದುಹಾಕಿ ಸರ್ವರಿಗೂ ಸಮಾನ ಘನತೆಯ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಬಸವಣ್ಣ ಶ್ರಮಿಸಿದರೆಂದು ಪ್ರೊ. ರಮೇಶ್ ವಿವರಿಸಿದರು. ಅನುಭವ ಮಂಟಪದ ಮೂಲಕ ಪ್ರಪಂಚಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಮಾದರಿ ಪರಿಚಯಿಸಿದ ಶರಣ ಚಳವಳಿ ಭಾರತ ಸಂವಿಧಾನದ ಆಶಯಗಳಿಗೂ ಪ್ರೇರಣೆ. ಕಾಯಕವೇ ಕೈಲಾಸ ತತ್ವದ ಮೂಲಕ ಶ್ರಮಜೀವನದ ಮೌಲ್ಯ ಎತ್ತಿಹಿಡಿದ ಬಸವಣ್ಣ ಮಾನವೀಯ ಧರ್ಮ ಪ್ರತಿಪಾದಿಸಿದ ಮಹಾ ಸಂತರೆಂದು ಬಣ್ಣಿಸಿದರು.
ಕುಲಸಚಿವರಾದ ಟಿ.ಜವರೇಗೌಡರ ಮಾರ್ಗದರ್ಶನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಹಿರಿಯ ಪ್ರಾಧ್ಯಾಪಕರಾದ ಪ್ರೊ.ದೇವರಾಜ್, ಪ್ರೊ. ಹರಿಪ್ರಸಾದ್, ಪ್ರೊ. ರಿತಿಕಾ ಸಿನ್ಹಾ, ಪ್ರೊ.ನಿರ್ಮಲಾ, ಎನ್.ಎಸ್.ಎಸ್. ಸಂಯೋಜಕರಾದ ಡಾ.ಗೋವಿಂದೇಗೌಡ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಡಾ. ಮಂಜು ಸಿ.ಎನ್. ಮತ್ತು ತಂಡದವರು ವಚನ ಗಾಯನ ಪ್ರಸ್ತುತಪಡಿಸಿದರು.