Bengaluru: ಟೆಕ್ಕಿ ಶರ್ಮಿಳಾ ಸಾವಿಗೆ ಬೆಂಕಿ ಆಕಸ್ಮಿಕ ಕಾರಣವಲ್ಲ: ಭಗ್ಮ ಪ್ರೇಮಿಯ ಕಿರಾತಕ ಕೃತ್ಯ !
ಬೆಂಗಳೂರು: ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಸಾಫ್ಟ್‌ವೇರ್ ಉದ್ಯೋಗಿಯ ಮನೆಗೆ ಬೆಂಕಿ ಬಿದ್ದು ಆಕೆ ಸಾವನ್ನಪ್ಪಿದ್ದ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದ್ದು, ಪೊಲೀಸರ ತನಿಖೆ ವೇಳೆ ಇದೊಂದು ಹತ್ಯೆಯೆಂದು ದೃಢಪಟ್ಟಿದೆ.
ಹತ್ಯೆ ಮಾಡಿದ 18 ವರ್ಷದ ಯುವಕ ಕರ್ಣಲ್ ಕುರೈ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸುಬ್ರಮಣ್ಯ ಲೇಔಟ್‌ನಲ್ಲಿ ಶರ್ಮಿಳಾ ವಾಸವಿದ್ದ ಮನೆಯ ಎದುರು ಮನೆಯಲ್ಲಿ ನೆಲೆಸಿದ್ದ ಕರ್ಣಲ್ ಕುರೈ, ಶರ್ಮಿಳಾರನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದನು. ಆದರೆ, ಈ ವಿಷಯ ಶರ್ಮಿಳಾಗೆ ತಿಳಿದಿರಲಿಲ್ಲ. ಜನವರಿ 3ರಂದು ರಾತ್ರಿ 9 ಗಂಟೆಗೆ ಶರ್ಮಿಳಾರ ಮನೆಗೆ ಕರ್ಣಲ್ ನುಗ್ಗಿದ್ದಾನೆ. ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಆತ ಏಕಾಏಕಿ ಶರ್ಮಿಳಾಳನ್ನು ತಬ್ಬಿ ಅನುಚಿತವಾಗಿ ವರ್ತಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಶರ್ಮಿಳಾ, ಆತನನ್ನು ತಳ್ಳಿ ದೂರ ಸರಿಯಲು ಯತ್ನಿಸಿದ್ದಾರೆ.
ಇದರಿಂದ ಕೋಪಗೊಂಡ ಆರೋಪಿ, ಶರ್ಮಿಳಾ ಮೇಲೆ ಹಲ್ಲೆ ನಡೆಸಿ, ಬಳಿಕ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಘಟನೆ ಬಳಿಕ ಯಾರಿಗೂ ಅನುಮಾನ ಬಾರದಂತೆ, ಕೊಲೆ ಮರೆಮಾಚುವ ಉದ್ದೇಶದಿಂದ ಮೃತ ಶರ್ಮಿಳಾ ಮಲಗಿದ್ದ ಬೆಡ್‌ರೂಂಗೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಮೂಲದ ಶರ್ಮಿಳಾ, ಕಳೆದ ಎರಡು ವರ್ಷಗಳಿಂದ ರಾಮಮೂರ್ತಿ ನಗರದ ಸುಬ್ರಮಣ್ಯ ಲೇಔಟ್‌ನಲ್ಲಿ ವಾಸವಾಗಿದ್ದರು. ಅವರು ನಗರದ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆರಂಭದಲ್ಲಿ, ಮನೆಗೆ ಬೆಂಕಿ ಬಿದ್ದಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಕೊಲೆ ರಹಸ್ಯವನ್ನು ಭೇದಿಸಿದ್ದಾರೆ.
ಅಸಹಜ ಸಾವು ದಾಖಲು: ಜನವರಿ 3ರಂದು ರಾತ್ರಿ 10:30ರ ಸುಮಾರಿಗೆ ಶರ್ಮಿಳಾ ವಾಸವಿದ್ದ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದನ್ನು ಕಂಡ ಮನೆ ಮಾಲೀಕ ವಿಜಯೇಂದ್ರ ಅವರು ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಬಳಿಕ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಮನೆಯ ಬಾಗಿಲು ಒಡೆದು ಒಳಗೆ ಹೋಗಿ ಪರಿಶೀಲಿಸಿದ್ದರು.
ಈ ವೇಳೆ ಮನೆಯಲ್ಲಿದ್ದ ಸೋಫಾ, ಕರ್ಟನ್, ಬೆಡ್ ಸುಟ್ಟು ಕರಕಲಾಗಿದ್ದು, ಶರ್ಮಿಳಾ ಪ್ರಜ್ಞಾಹೀನಳಾಗಿ ಬಿದ್ದಿರುವುದು ಕಂಡು ಬಂದಿತ್ತು. ಬೆಂಕಿ ನಂದಿಸಿದ್ದ ಪೊಲೀಸರು ತಕ್ಷಣ ಶರ್ಮಿಳಾರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಪರೀಕ್ಷೆ ನಡೆಸಿದ್ದ ವೈದ್ಯರು ಆಕೆ ಮೃತ ಪಟ್ಟಿರುವುದಾಗಿ ದೃಢಪಡಿಸಿದ್ದರು.
ನಂತರ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು, ಬೆಂಕಿ ಅವಘಡಕ್ಕೆ ನಿಖರ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದರು. ಕೊನೆಗೆ ಇದು ಅಸಹಜ ಸಾವಲ್ಲ ಕೊಲೆ ಎಂಬುದು ಬಯಲಾಗಿದೆ.


