ಬೆಂಗಳೂರು: ರೈಲ್ವೇ ಹಳಿಗೆ ಏಕಾಏಕಿ ನುಗ್ಗಿದ್ದ ಬಿಎಂಟಿಸಿ ಬಸ್ಗೆ ರೈಲು ಡಿಕ್ಕಿ ಹೊಡೆದಿದ್ದು, ನಿರ್ವಾಹಕ ಗಾಯಗೊಂಡು, ಬಸ್ ಸಂಪೂರ್ಣ ಜಖಂಗೊAಡಿರುವ ಘಟನೆ ಕೆ.ಆರ್.ಪುರ ಬಳಿ ನಡೆದಿದೆ.
ಸಾದರಮಂಗಲ ಡಿಪೋದಿಂದ ಕಾಡುಗೋಡಿ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದ ಬಸ್ ಅನ್ನು ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ರಿವರ್ಸ್ ತೆಗೆಯಲು ಹೋಗಿದ್ದ ಚಾಲಕ, ರಭಸವಾಗಿ ನುಗ್ಗಿಸಿದ್ದಾನೆ. ಆಗ ಬಸ್ ರೈಲ್ವೆ ಹಳಿಯ ಮೇಲೆ ನುಗ್ಗಿದೆ ಎನ್ನಲಾಗಿದೆ.
ಸಾದರಮಂಗಲ ಬಸ್ ಡಿಪೋ ಕೆಎ ೫೭ ಎಫ್ ೬೦೦೦ ಬಸ್ ಇದಾಗಿದ್ದು, ಬಸ್ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಹೀಗಾಗಿ, ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎನ್ನಲಾಗಿದೆ. ಒಂದು ವೇಳೆ ಗುದ್ದಿದ್ದ ರಭಸಕ್ಕೆ ರೈಲು ಹಳಿತಪ್ಪಿದ್ದರೂ, ಭಾರಿ ಅನಾಹುತವಾಗುವ ಸಾಧ್ಯತೆಯಿತ್ತು ಎನ್ನಲಾಗಿದೆ.
ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದ್ದು, ನಿರ್ವಾಹಕ ಗಾಯಗೊಂಡು ಆಸ್ಪತ್ರೆಗೆ ಸೇರಿಸಲಾಗಿದೆ. ಕಾಡುಗೋಡಿ ಸಂಚಾರ ಪೊಲೀಸರು ಮತ್ತು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

