ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷ ಬರಗಾಲ ಕಾರಣ ಸಣ್ಣ-ಅತೀ ಸಣ್ಣ ರೈತರು ವಾರ್ಷಿಕ ಬೆಳೆ ನಷ್ಟದಿಂದ ತುಂಬಾ ಕಂಗಾಲಿದ್ದು, ಅವರ ಜೀವನೋಪಾಯ ನಷ್ಟ ಭರಿಸಲು ಸುಮಾರು 18 ಲಕ್ಷ ರೈತರಿಗೆ ತಲಾ 3,000 ರೂ.ಗಳಂತೆ 500 ಕೋಟಿ ರೂ. ಪರಿಹಾರ ವಿತರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಮುಂದಿನ ಒಂದು ವಾರದಲ್ಲಿ ರೈತರ ಖಾತೆಗೆ ಈ ಹಣ ಜಮೆಯಾಗಲಿದೆ ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಸೋಮವಾರ ಇಲ್ಲಿನ ಡಿ.ಸಿ.ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಕಳೆದ ವರ್ಷ ಅತ್ಯಂತ ಭೀಕರ ಬರಗಾಲದಿಂದ ರೈತ ಸಮುದಾಯ ತತ್ತರಿಸಿತು. ಹೀಗಾಗಿ ರೈತ ಸಮುದಾಯದ ರಕ್ಷಣೆಗೆ ಸರ್ಕಾರ ಮುಂದಾಗಿದೆ ಎಂದರು.
ಕಳೆದ ವರ್ಷ ಬರಗಾಲ ಕಾರಣ ಕೇಂದ್ರ ಸರ್ಕಾರ ಕಾಲಮಿತಿಯಲ್ಲಿ ರೈತರಿಂದ ಅರ್ಜಿ ಕಾಯದೆ ಪರಿಹಾರ ನೀಡದ ಕಾರಣ ಸುಮಾರು 40 ಲಕ್ಷ ರೈತರಿಗೆ ರಾಜ್ಯ ಸರ್ಕಾರವೆ ಎಸ್.ಡಿ.ಆರ್.ಎಫ್. ನಿಧಿಯಡಿ 2,451 ಕೋಟಿ ರೂ. ಬರಗಾಲ ಪರಿಹಾರ ನೀಡಿದೆ. ಇದು ದೇಶದಲ್ಲಿ ದೊಡ್ಡ ಮೊತ್ತದ ಪರಿಹಾರ ಆಗಿದೆ ಎಂದರು.

