ಬೆಂಗಳೂರು: ಬೈಕ್ ಟ್ಯಾಕ್ಸಿ ಸ್ಥಗಿತಗೊಳಿಸುವ ಸಂಬಂಧ ಆರು ವಾರಗಳಲ್ಲಿ ನಿಲ್ಲಿಸುವಂತೆ ನ್ಯಾಯಾಲಯ ಆದೇಶ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಪ್ರತಿಕ್ರಿಸಿದ್ದು, ನ್ಯಾಯಾಲಯದ ಆದೇಶದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಯಾವುದೇ ವಾಹನ ಓಡಿಸಲು ಸಾರಿಗೆ ಇಲಾಖೆಯ ಪರ್ಮಿಟ್ ಪಡೆಯಬೇಕು. ಅದರಲ್ಲೂ ವಾಣಿಜ್ಯ ಓಡಿಸಲು ವಾಹನ ಪರವಾನಗಿ ಪಡೆಯಬೇಕು. ರ್ಯಾಪಿಡೋ, ಓಲಾ, ಊಬರ್ ನಲ್ಲಿ ಸ್ವಂತ ವಾಹನ ತೆಗೆದುಕೊಂಡು, ಕಮರ್ಷಿಯಲ್ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ, ನ್ಯಾಯಾಲಯ ಅವುಗಳನ್ನು ಸ್ಥಗಿತಗೊಳಿಸಲು ಸೂಚಿಸಿದೆ ಎಂದರು.
ಕೋರ್ಟ್ ಆದೇಶ ಬಂದ ಮೇಲೆ ಕಂಪನಿಯವರೇ ನಿಲ್ಲಿಸುತ್ತಾರೆ. ಇಲ್ಲವಾದಲ್ಲಿ ನ್ಯಾಯಾಂಗ ನಿಂದನೆಯಾಗುತ್ತದೆ. ಹೀಗಾಗಿ, ಸರಕಾರ ಏನಾದರೂ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ. ನ್ಯಾಯಾಲಯದ ಆದೇಶ ಮೀರಿ ಕಾರ್ಯಾಚರಣೆ ನಡೆಸಿದರೆ, ಅನಂತರ ಸಾರಿಗೆ ಇಲಾಖೆಯಿಂದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೊಸ ಮಾರ್ಗ ಸೂಚಿ ಹೊರಡಿಸಲು ಮೂರು ತಿಂಗಳು ಸಮಯಾವಕಾಶವಿದೆ. ಮುಂದೆ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಸಧ್ಯಕ್ಕೆ ಅವರು ಕಾರ್ಯಾಚರಣೆ ನಿಲ್ಲಿಸುತ್ತಾರೆ. ಹೀಗಾಗಿ, ಸಮಸ್ಯೆ ಸೃಷ್ಟಿಯಾಗುವುದಿಲ್ಲ ಎಂದು ತಿಳಿಸಿದರು.