ರಾಜಕೀಯ ಸುದ್ದಿ

ರಾಜ್ಯ ಬಿಜೆಪಿಯ 3 ಶಾಸಕರು-ಇಬ್ಬರು ಮಾಜಿ ಸಚಿವರಿಗೆ ಶೋಕಾಸ್ ನೋಟಿಸ್

Share It

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಮುಂದಾಗಿದೆ. ಮಾಜಿ ಕೇಂದ್ರ ಸಚಿವ- ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿತ್ತು, ಇದರ ಬೆನ್ನಲ್ಲೇ ಇದೀಗ 3 ಹಾಲಿ ಶಾಸಕರು ಹಾಗೂ ಇಬ್ಬರು ಮಾಜಿ ಸಚಿವರಿಗೆ ಶೋಕಾಸ್​ ನೋಟಿಸ್ ನೀಡಿದೆ.

ಪಕ್ಷದ ಆಂತರಿಕ ವಿಚಾರಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆ ಮಾಡಿದ ಆರೋಪದ ಮೇಲೆ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಹರಿಹರ ಶಾಸಕ ಬಿ.ಪಿ.ಹರೀಶ್ ಅವರಿಗೆ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ನೀಡಿದೆ. ಇದರ ಜೊತೆಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರ ಆಪ್ತರಾದ ಮಾಜಿ ಸಚಿವರಾದ ಎಂ.ಪಿ ರೇಣುಕಾಚಾರ್ಯ ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ಕೂಡ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್‌ ಜಾರಿ ಮಾಡಿದೆ.

ಹರಿಹರ ಶಾಸಕ ಬಿ.ಪಿ ಹರೀಶ್ ಅವರು ಯತ್ನಾಳ್​ ಬಣದಲ್ಲಿ ಗುರುತಿಸಿಕೊಂಡಿದ್ದರೆ, ಮಾಜಿ ಸಚಿವರಾದ ಹೊನ್ನಾಳಿಯ ಎಂ.ಪಿ ರೇಣುಕಾಚಾರ್ಯ ಹಾಗೂ ಬೆಂಗಳೂರಿನ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಆಪರೇಷನ್ ಕಮಲದಿಂದ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಶಾಸಕರಾಗಿ-ಸಚಿವರಾಗಿ ಮತ್ತು ಇದೀಗ ಪುನಃ ಶಾಸಕರಾಗಿರುವ ಎಸ್​​.ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್​​ ಅವರು ಇದೀಗ ನಾಮಕಾವಸ್ತೆಗೆ ಬಿಜೆಪಿ ಶಾಸಕರಾಗಿ ಕಾಂಗ್ರೆಸ್ ಶಾಸಕರಂತೆ ವರ್ತಿಸಿ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ.

ಜೊತೆಗೆ ಈ ಇಬ್ಬರೂ ವಲಸಿಗ ಶಾಸಕರು ಬಿಜೆಪಿ ಕಾರ್ಯಚಟುವಟಿಕೆಗಳಿಂದ ದೂರು ಉಳಿದಿದ್ದಾರೆ. ಅಲ್ಲದೇ ಬಹಿರಂಗವಾಗಿಯೇ ಕಾಂಗ್ರೆಸ್​ ನಾಯಕರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಇವರುಗಳಿಗೆ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದ್ದು, 72 ಗಂಟೆಗಳಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ.

ಹಿಂದೆ ಯಡಿಯೂರಪ್ಪ ಅವರಿಗೆ ಆಪ್ತರಾಗಿ, ಇದೀಗ ಅವರ ಪುತ್ರ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಪರ ಹೇಳಿಕೆ ನೀಡಿರುವ ಮಾಜಿ ಸಚಿವರಾದ ಹೊನ್ನಾಳಿಯ ಎಂ.ಪಿ.ರೇಣುಕಾಚಾರ್ಯ ಹಾಗೂ ಬೆಂಗಳೂರಿನ ಸುಬ್ರಹ್ಮಣ್ಯ ನಾಯ್ಡು ಸೇರಿಕೊಂಡು ಯತ್ನಾಳ್​ಗೆ ಟಾಂಗ್ ಕೊಡಲು ಸಭೆ ಮೇಲೆ ಸಭೆ ಮಾಡಿದ್ದರು.

ಅಲ್ಲದೇ ಬೃಹತ್ ಸಮಾವೇಶ ಮಾಡುವ ಮೂಲಕ ಪರೋಕ್ಷವಾಗಿ ಯತ್ನಾಳ್​ ಹಾಗೂ ಹೈಕಮಾಂಡ್​ಗೆ ವಿಜಯೇಂದ್ರ ಮತ್ತು ಯಡಿಯೂರಪ್ಪನವರ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ನಡುವೆಯೇ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಕರ್ನಾಟಕ ಬಿಜೆಪಿಯಲ್ಲಿ ಬಣ ಬಡಿದಾಟಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್, ಇಬ್ಬರು ಶಾಸಕರ ವಿರುದ್ಧ ಶಿಸ್ತುಕ್ರಮ ಆಗುತ್ತೆ. ಪಕ್ಷ ದ್ರೋಹ ಕೆಲಸ ಮಾಡಿದ ಈ ಇಬ್ಬರು ಶಾಸಕರ ವಿರುದ್ಧ ಈ ತಿಂಗಳಾಂತ್ಯದಲ್ಲಿ ಶಿಸ್ತುಕ್ರಮ ಆಗುತ್ತೆ ಎಂದು ಪರೋಕ್ಷವಾಗಿ ವಲಸಿಗ ಬಂಡಾಯ ಶಾಸಕರಾದ ಎಸ್.ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಬಗ್ಗೆ ಕಡ್ಡಿಮುರಿದಂತೆ ಹೇಳಿದ್ದರು.

ಅಲ್ಲದೇ ಪಕ್ಷದಲ್ಲಿರುವ ಎಲ್ಲಾ ಗೊಂದಲಕ್ಕೆ ಈ ತಿಂಗಳಾಂತ್ಯಕ್ಕೆ ತೆರೆ ಬೀಳುತ್ತೆ ಎಂದೂ ಸಹ ಅವರು ಸ್ಪಷ್ಟಪಡಿಸಿದ್ದರು. ಅದರಂತೆ ಇದೀಗ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಈ ಇಬ್ಬರು ಬಂಡಾಯ ಶಾಸಕರ ಜೊತೆಗೆ ಹರಿಹರ ಶಾಸಕ ಬಿ.ಪಿ.ಹರೀಶ್ ಅವರಿಗೂ ಶೋಕಾಸ್ ನೋಟಿಸ್​ ಜಾರಿ ಮಾಡುವ ಮೂಲಕ ಬಣಗಳ ಬಡಿದಾಟಕ್ಕೆ ಬ್ರೇಕ್​ ಹಾಕಲು ಮುಂದಾಗಿದೆ.


Share It

You cannot copy content of this page