ಶಿವಮೊಗ್ಗ: ವಿವಾಹಿತ ಮಹಿಳೆಯೊಬ್ಬರ ಜತೆಗೆ ಸಂಬಂಧ ಬೆಳಸಿ, ಮದುವೆಯಾಗುವುದಾಗಿ ನಂಬಿಸಿ, ಕೈಕೊಟ್ಟಿದ್ದ ಬಿಜೆಪಿ ಮುಖಂಡನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಬಿಜೆಪಿ ಮುಖಂಡ ಶರತ್ ಕಲ್ಯಾಣಿ ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿರುವ ಜೊತೆಗೆ ಸಂತ್ರಸ್ತೆಯಿಂದ 4 ಲಕ್ಷ ರೂ. ಹಣ ಪಡೆದು ಹಿಂದಿರುಗಿಸದೆ ವಂಚಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಪ್ರಮುಖ್ ಆಗಿರುವ ಶರತ್ ವಿರುದ್ಧ ಜು. 26 ರಂದು ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದಲ್ಲಿ ಪೊಲೀಸರು ಎಫ್‌ಐಆರ್ ದಾಖಲು ಮಾಡುತ್ತಿದ್ದಂತೆ, ಶರತ್ ನಾಪತ್ತೆಯಾಗಿದ್ದ. ಇದೀಗ ಶರತ್ ವಿಜಯಪುರದ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಶರತ್ ಕಲ್ಯಾಣಿ ತನಗೆ ಮದುವೆಯಾಗಿರುವ ಮಾಹಿತಿ ಮುಚ್ಚಿಟ್ಟು ನಾನಿನ್ನು ಅವಿವಾಹಿತ. ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗಿ ನಿನಗೆ ಬಾಳು ಕೊಡುತ್ತೇನೆ ಎಂದು ನಂಬಿಸಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ 43 ವರ್ಷದ ವಿಚ್ಛೇದಿತ ಮಹಿಳೆ ದೂರು ನೀಡಿದ್ದರು.
ಮಹಿಳೆ ಮದುವೆಗೆ ಒತ್ತಾಯಿಸಿದಾಗ ತನಗೆ ಹಣಕಾಸಿನ ಸಮಸ್ಯೆಯಿದ್ದು, ಅದನ್ನು ಬಗೆಹರಿಸಿದರೆ ಮದುವೆಯಾಗುವುದಾಗಿ ನಂಬಿಸಿದ್ದ. ಈ ವೇಳೆ ಮಹಿಳೆ ಹಲವು ಬಾರಿ ಹಣ ನೀಡಿದ್ದು, ಒಟ್ಟು 4 ಲಕ್ಷ ಹಣವನ್ನು ನೀಡಿದ್ದರು. ನಂತರ ಮಹಿಳೆ ಮದುವೆಗೆ ಒತ್ತಾಯಿಸಿದಾಗ ಶರತ್ ಆಕೆ ಮನೆ ಕಡೆ ಹೋಗುವುದನ್ನು ನಿಲ್ಲಿಸಿದ್ದಲ್ಲದೆ, ಫೋನ್ ಸಂಪರ್ಕ ಕಡಿದುಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.