ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತರಿಂದ ಬಂಧಿತರಾಗಿ ಜೈಲು ಸೇರಿದ್ದ ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿಗೆ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಡಾ. ಚಂದ್ರು ಲಮಾಣಿಯನ್ನು ಲೋಕಾಯುಕ್ತ ಪೊಲೀಸರು ಗುತ್ತಿಗೆದಾರರಿಂದ ಲಂಚ ಸ್ವೀಕರಿಸುವಾಗ ಗದಗದಲ್ಲಿ ಬಂಧಿಸಿದ್ದರು. ಅನಂತರ ಅವರನ್ನು ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಹೀಗಾಗಿ, ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು.
ಗುತ್ತಿಗೆದಾರರಿಂದ 14 ಲಕ್ಷ ರು. ಲಂಚಕ್ಕೆ ಬೇಡಿಕೆಯಿಟ್ಟಿದ್ದು, 5 ಲಕ್ಷ ರು. ಲಂಚ ಸ್ವೀಕಾರ ಮಾಡುವಾಗ ಲೋಕಾಯುಕ್ತ ಬಲೆಗೆ ಶಾಸಕ ಚಂದ್ರು ಬಿದ್ದಿದ್ದರು. ಅವರ ಜತೆಗೆ ಅವರ ಆಪ್ತಸಹಾಯಕ ಮಂಜುನಾಥ್ ಮತ್ತು ಮತ್ತೊಬ್ಬ ಸಹಾಯಕನನ್ನು ಬಂಧಿಸಲಾಗಿತ್ತು.
ಇದೀಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಚಂದ್ರು ಲಮಾಣಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ತನಿಖೆಗೆ ಸಹಕಾರ ನೀಡುವುದು ಸೇರಿ ಕೆಲವು ಷರತ್ತುಗಳನ್ನು ನ್ಯಾಯಾಲಯ ವಿಧಿಸಿದ್ದು, ಜಾಮೀನು ಮಂಜೂರಾಗಿದೆ.

