ಉಪಯುಕ್ತ ಸುದ್ದಿ

ಮೆಟ್ರೋ ಪ್ರಯಾಣ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್ :ಜಟಾಪಟಿಯ ನಡುವೆ ತಟಸ್ಥ‌ ನೀತಿಗೆ ಬಂದ BMRCL

Share It

ಬೆಂಗಳೂರು: ಇಂದಿನಿಂದ ಜಾರಿಗೆ ಬರಬೇಕಿದ್ದ ನಮ್ಮ ಮೆಟ್ರೋ ರೈಲು ದರ ಪರಿಷ್ಕರಣೆ ನಿರ್ಧಾರವನ್ನು ಮುಂದಿನ ಆದೇಶಗಳ ತನಕ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ತಿಳಿಸಿದೆ.

ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆ ಮೂಲಕ ಈ ಮಾಹಿತಿ ನೀಡಿದ್ದಾರೆ. ಫೆಬ್ರವರಿ 5, 2026ರ ಪ್ರಕಟಣೆಯಲ್ಲಿ ಫೆ.9ರಿಂದ ವಾರ್ಷಿಕ ಸ್ವಯಂಚಾಲಿತ ದರ ಜಾರಿಗೆ ಬರಲಿದೆ ಎಂದು ತಿಳಿಸಲಾಗಿತ್ತು. ಆದರೆ ಈ ನಿರ್ಧಾರವನ್ನು ಮುಂದಿನ ಆದೇಶಗಳ ತನಕ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

ನಿರ್ದೇಶಕರ ಮಂಡಳಿಯ ಪರಿಶೀಲನೆ ಬಳಿಕ ಪರಿಷ್ಕೃತ ದರದ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಾಗುವುದು. ಬಿಎಂಆರ್‌ಸಿಎಲ್ ಬೆಂಗಳೂರು ನಾಗರಿಕರಿಗೆ ಸುರಕ್ಷಿತ, ನಂಬಿಗಸ್ತ ಮತ್ತು ಕೈಗೆಟುಕುವ ಮೆಟ್ರೋ ಸೇವೆಗಳನ್ನು ಒದಗಿಸಲು ಸದಾ ಬದ್ಧವಾಗಿದೆ ಎಂದು ತಿಳಿಸಲಾಗಿದೆ.

ಮೆಟ್ರೋ ಪ್ರಯಾಣ ದರವನ್ನು ಶೇ.5ರಷ್ಟು ಹೆಚ್ಚಿಸಿ ಪ್ರಕಟಣೆ ಹೊರಡಿಸಲಾಗಿತ್ತು. ಪರಿಷ್ಕೃತ ಪಟ್ಟಿ ಪ್ರಕಾರ, 2 ಕಿ.ಮೀ.ವರೆಗಿನ ಅಲ್ಪದೂರ ಪ್ರಯಾಣಕ್ಕಿದ್ದ ಕನಿಷ್ಠ ದರವು 10 ರೂ.ಗಳಿಂದ 11 ರೂ.ಗೆ ಹೆಚ್ಚಳವಾಗಬೇಕಿತ್ತು. 30 ಕಿ.ಮೀ.ಗೂ ಅಧಿಕ ದೂರ ಪ್ರಯಾಣಿಸುವವರಿಗೆ 90 ರೂ.ಗಳಿದ್ದ ದರವು 95 ರೂ.ಗೆ ಏರಿಸಲಾಗಿತ್ತು. ಇತರ ದರ ಸ್ಲ್ಯಾಬ್‌ಗಳು 1 ರೂ.ಯಿಂದ 5 ರೂ.ಗೆ ಪ್ರಮಾಣಾನುಗುಣವಾಗಿ ಹೆಚ್ಚಳವಾಗಬೇಕಿತ್ತು.


Share It

You cannot copy content of this page