ಬಿಎಂಟಿಸಿ ನಿರ್ವಾಹಕ ಹುದ್ದೆಯ ಪರೀಕ್ಷೆಯಲ್ಲಿ ನಕಲು ಆರೋಪ: ಧಾರವಾಡದಲ್ಲಿ ಕಾಪಿ ಚೀಟಿ ಪತ್ತೆ
ಧಾರವಾಡ: 2500 ಬಿಎಂಟಿಸಿ ನಿರ್ವಾಹಕರ ಹುದ್ದೆಗಳಿಗೆ ನಡೆಯುತ್ತಿರುವ ಲಿಖಿತ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಆರೋಪ ಕೇಳಿಬಂದಿದ್ದು, ಧಾರವಾಡದ ಪರೀಕ್ಷಾ ಕೇಂದ್ರದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಧಾರವಾಡದ ಬಾಸೆಲ್ ಮಿಷನ್ ಸ್ಕೂಲ್ ನ ಪರೀಕ್ಷಾ ಕೇಂದ್ರದಲ್ಲಿ ಸಾಮಾನ್ಯ ಜ್ಞಾನ ಪತ್ರಿಕೆಯ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ಮೊದಲ ಮಹಡಿಯಿಂದ ನಕಲು ಚೀಟಿ ಕೆಳಗೆ ಬಿದ್ದಿತ್ತು. ಇದನ್ನು ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಮಹಾಂತೇಶ್ ಎಂಬಾತ ಪರೀಕ್ಷಾ ಸಿಬ್ಬಂದಿಯ ಗಮನಕ್ಕೆ ತಂದ. ಮೊದಲ ಮಹಡಿಯಲ್ಲಿ ಪರೀಕ್ಷೆ ಬರೆಯುತ್ತಿದ್ದವರು ಬಳಸಿ ಬಿಸಾಡಿದ್ದಾರೆ ಎಂಬ ಅನುಮಾನದಲ್ಲಿ ಹುಟುಕಾಟ ನಡೆಸಲಾಯಿತು.
ನಕಲು ಚೀಟಿಯಲ್ಲಿ 5 ಅಂಕಗಳಿಗೆ ಉತ್ತರ ಬರೆದು ಕಳುಹಿಸಲಾಗಿತ್ತು. ಸ್ಥಳಕ್ಕೆ ತಹಸೀಲ್ದಾರ್ ದೊಡ್ಡಪ್ಪ ಹೂಗಾರ್ ಹಾಗೂ ಶಹರ ಪೊಲೀಸ್ ಠಾಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯಿಂದ ಕೆಲ ಕಾಲ ಪರೀಕ್ಷಾ ಕೇಂದ್ರಗಳಲ್ಲಿ ಗೊಂದಲವುAಟಾಗಿತ್ತು. ಅಭ್ಯರ್ಥಿಗಳು ನಾವು ನಿಯತ್ತಾಗಿ ಪರೀಕ್ಷೆ ಬರೆದರೂ, ನಕಲು ಮಾಡಿದವರು ಹೆಚ್ಚು ಅಂಕ ಪಡೆಯುತ್ತಾರೆ. ಅವರಿಗೆ ಸರಿಯಾಗಿ ಶಿಕ್ಷೆ ಕೊಡಿ ಇಲ್ಲವಾದಲ್ಲಿ ಮರುಪರೀಕ್ಷೆ ನಡೆಸಿ ಎಂದು ಪಟ್ಟುಹಿಡಿದರು ಎನ್ನಲಾಗಿದೆ.


