BMTCಗೆ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಬಸ್ ಗಳ ಸೇರ್ಪಡೆಗೆ ಸಚಿವ ಸಂಪುಟದ ಒಪ್ಪಿಗೆ
ಬೆಂಗಳೂರು; ಬಿಎಂಟಿಸಿಗೆ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಬಸ್ ಗಳನ್ನು ಖರೀದಿಸಲು ಅನುದಾನ ಬಿಡುಗಡೆ ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ. ಹೀಗಾಗಿ, ಬಿಎಂಟಿಸಿ ಪ್ರಯಾಣ ಮತ್ತಷ್ಟು ಆರಾಮದಾಯಕವಾಗಲಿದೆ.
15 ನೇ ಹಣಕಾಸು ಆಯೋಗದ 30 ಕೋಟಿ ಅನುದಾನದಿಂದ 76 ಹವಾನಿಯಂತ್ರಿತ ರಹಿತ ಎಲೆಕ್ಟ್ರಿಕ್ ಬಸ್ ಗಳನ್ನು ಪ್ರತಿ ಕಿ.ಮೀ ಗೆ 41 ರು ದರದಲ್ಲಿ ಕಾರ್ಯಾಚರಣೆ ಮಾಡಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ.
51 ಎಲೆಕ್ಟ್ರಿಕ್ ಬಸ್ ಗಳ ಖರೀದಿಗೆ 15 ನೇ ಹಣಕಾಸು ಆಯೋಗದಿಂದ 25 ಕೋಟಿ ರು.ಗಳ ಅನುದಾನ ಬಡುಗಡೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಆ ಮೂಲಕ ನಗರದ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಸರಕಾರ ಮತ್ತೊಂದು ಮಹತ್ತರವಾದ ಹೆಜ್ಜೆಯನ್ನಿಟ್ಟಿದೆ ಎನ್ನಬಹುದು.
ಜತೆಗೆ ನಗರ ಭೂ ಸಾರಿಗೆ ನಿರ್ದೇಶನಾಲಯದ ರಾಜ್ಯ ನಗರ ಸಾರಿಗೆ ನಿಧಿಯಲ್ಲಿ ಮಂಜೂರಾಗಿರುವ 29.13 ಕೋಟಿ ರು. ಅನುದಾನದಿಂದ 21 ಎಲೆಕ್ಟ್ರಿಕ್ ಬಸ್ ಗಳನ್ನು ಖರೀದಿಸಲು ರಾಜ್ಯ ಸಚಿವ ಸಂಪುಟದ ಒಪ್ಪಿಗೆ ದೊರೆತಿದೆ.
ಹೀಗಾಗಿ, ಹೊಸ ಬಸ್ ಗಳು ಮತ್ತಷ್ಟು ಹೆಚ್ಚಾಗಲಿವೆ. ಆ ಮೂಲಕ ನಗರದ ಜನತೆಗೆ ಮತ್ತಷ್ಟು ಉತ್ಕೃಷ್ಟ ಸಾರಿಗೆ ಸೇವೆ ಒದಗಿಸಲ ಬಿಎಂಟಿಸಿಗೆ ಸಹಾಯಕವಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.


