ಉಪಯುಕ್ತ ಸುದ್ದಿ

ಬಿಎಂಟಿಸಿ ಸಿಬ್ಬಂದಿಗೆ ವಿಮೆ ಮತ್ತು ಅನುಕಂಪದ ಆಧಾರದ ನೇಮಕಾತಿ ಆದೇಶ ಪತ್ರ : ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ವಿತರಣೆ

Share It

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ನೌಕರರ ಮತ್ತು ಅವರ ಕುಟುಂಬದ ಆರ್ಥಿಕ ಭದ್ರತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮೃತ ನೌಕರರ ಅವಲಂಬಿತರಿಗೆ ಅನುಕಂಪ ಆಧಾರಿತ ನೇಮಕಾತಿ ಆದೇಶ ಪತ್ರ ಹಾಗೂ ವಿಮಾ ಪರಿಹಾರದ ಚೆಕ್‌ಗಳನ್ನು ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಂಪು ವಿಮಾ ಯೋಜನೆಯ ಪರಿಷ್ಕರಣೆ: ನಾವು ಅಧಿಕಾರಕ್ಕೆ ಬಂದ ನಂತರ ನೌಕರರ ಹಿತದೃಷ್ಟಿಯಿಂದ ವಿಮಾ ಯೋಜನೆಯನ್ನು ಪರಿಷ್ಕರಿಸಿದ್ದೇವೆ. ಕರ್ತವ್ಯ ನಿರತ ಅಥವಾ ವೈಯಕ್ತಿಕ ಅಪಘಾತದಿಂದ ನೌಕರರು ಮೃತಪಟ್ಟಲ್ಲಿ ₹50.00 ಲಕ್ಷ ಪರಿಹಾರ ನೀಡಲಾಗುತ್ತಿದೆ ಎಂದು ವಿವರಣೆ ನೀಡಿದರು.

ಸ್ವಸ್ವಾಭಾವಿಕ ಕಾರಣಗಳಿಂದ ಮೃತಪಟ್ಟಲ್ಲಿ ನೀಡಲಾಗುತ್ತಿದ್ದ ವಿಮಾ ಮೊತ್ತವನ್ನು ಅಕ್ಟೋಬರ್ 1, 2025 ರಿಂದ ಜಾರಿಗೆ ಬರುವಂತೆ ₹12.00 ಲಕ್ಷಕ್ಕೆ ಏರಿಸಲಾಗಿದೆ. ಸ್ವಾಭಾವಿಕ/ಇನ್ನಿತರೆ ಕಾರಣಗಳಿಂದ ಮೃತಪಟ್ಟ 120 ನೌಕರರ ಕುಟುಂಬಗಳಿಗೆ ₹12 ಕೋಟಿ ಗುಂಪು ವಿಮಾ ಪರಿಹಾರ ನೀಡಲಾಗುತ್ತದೆ ಎಂದರು.

ಅಪಘಾತದಿಂದ ಮೃತಪಟ್ಟ 12 ನೌಕರರ ಕುಟುಂಬಗಳಿಗೆ ₹6 ಕೋಟಿ ಅಪಘಾತ ವಿಮಾ ಪರಿಹಾರವನ್ನು ವಿತರಿಸಲಾಯಿತು. ಕಷ್ಟದ ಸಮಯದಲ್ಲಿ ನೌಕರರ ಕುಟುಂಬಕ್ಕೆ ಆರ್ಥಿಕ ಆಸರೆ ನೀಡುವುದು ನಮ್ಮ ಆದ್ಯತೆಯಾಗಿದೆ. ನೂತನವಾಗಿ ಸಂಸ್ಥೆಗೆ ಸೇರ್ಪಡೆಗೊಂಡ ಅಭ್ಯರ್ಥಿಗಳಿಗೆ ಅಭಿನಂದನೆಗಳು ಎಂದು ಅವರು ಹಾರೈಸಿದರು.

ಈ ಸಂದರ್ಭದಲ್ಲಿ ಬಿಎಂಟಿಸಿ ಸಂಸ್ಥೆ ಅಧ್ಯಕ್ಷ ವಿ.ಎಸ್. ಆರಾಧ್ಯ, ಉಪಾಧ್ಯಕ್ಷ ನಿಕೇತ್ ರಾಜ್ ಎಂ., ವ್ಯವಸ್ಥಾಪಕ ನಿರ್ದೇಶಕ ಕೆ.ಬಿ. ಶಿವಕುಮಾರ್,  ನಿರ್ದೇಶಕರಾದ ಅಬ್ದುಲ್ ಅಹದ್, ಶಿಲ್ಪಾ ಎಂ. ಹಾಗೂ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.


Share It

You cannot copy content of this page