ಬೆಂಗಳೂರು: ಬೆಂಗಳೂರು ನಗರದ ಪ್ರತಿಯೊಬ್ಬ ಪ್ರಜೆಗೂ ಸೇವೆ ನೀಡುವ ಮೂಲಕ ನಗರದ ಕೊನೆಯ ಮೈಲಿಯವರೆಗೆ ಸುರಕ್ಷಿತ ಸೇವೆ ಒದಗಿಸುವುದಷ್ಟೇ ಬಿಎಂಟಿಸಿ ಉದ್ದೇಶವೇ ಹೊರತು, ಲಾಭ ಮಾಡುವುದಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.
ಉಸ್ಯಮಿ ಮೋಹನ್ ದಾಸ್ ಅವರ ಟ್ವೀಟ್ ಸರಣಿಗೆ ಉತ್ತರಿಸಿರುವ ಅವರು, ರಾಜ್ಯದ ಜನ ತಮ್ಮ ಹಕ್ಕುಗಳನ್ನು ರಕ್ಷಿಸಲು ಮತ್ತು ಉತ್ತಮ ಆಡಳಿತ ನೀಡಲು ನಮ್ಮ ಸರ್ಕಾರಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ. ನಾವು ‘ಹೊಡೆದಾಳುವ’ ಉದ್ದೇಶದಿಂದ ಬಂದಿಲ್ಲ. ನಾನು ಮತ್ತೊಂದು ರಾಜ್ಯದ ಸಚಿವನಲ್ಲ, ನೀವು ಕೂಡ ಮತ್ತೊಂದು ರಾಜ್ಯದ ನಾಗರಿಕರಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ.
ಇತರ ರಾಜ್ಯಗಳು ಹಾಗೂ ಅವುಗಳ ಪ್ರಮುಖ ಮಹಾನಗರಗಳೊಂದಿಗೆ ಹೋಲಿಸಿದಾಗ ನಮ್ಮ ಬಿಎಂಟಿಸಿ (BMTC) ಬಹಳ ಉತ್ತಮವಾಗಿದೆ ಎಂಬುದನ್ನು ಅಂಕಿಅಂಶಗಳು ಮಾತನ್ನಾಡುತ್ತವೆ. ನಾವು ನೂರಕ್ಕೆ ನೂರರಷ್ಟು ಪರಿಪೂರ್ಣ ಅಲ್ಲದಿರಬಹುದು, ಆದರೆ, ಪ್ರತಿದಿನ ಅದನ್ನು ಇನ್ನಷ್ಟು ಪರಿಣಾಮಕಾರಿ ಹಾಗೂ ಶ್ರೇಷ್ಠ ಮಟ್ಟಕ್ಕೆ ತಲುಪಿಸಲು ನಾವು ಶ್ರಮಿಸುತ್ತಿದ್ದೇವೆ. ಬೆಂಗಳೂರು ನಗರದ ವಿಶಾಲ ಹಾಗೂ ಸಂಕೀರ್ಣ ಭೌಗೋಳಿಕ ಪರಿಸ್ಥಿತಿಯನ್ನು ಸಿಂಗಾಪುರದ ಮಾದರಿಯೊಂದಿಗೆ ಹೋಲಿಸುವುದು ‘ಸಮಾನ ಹೋಲಿಕೆ’ (apples-to-apples comparison) ಅಲ್ಲ ಎಂದಿದ್ದಾರೆ.
ನಾನು ಮೊದಲೇ ಹೇಳಿದಂತೆ, ಬಿಎಂಟಿಸಿಯಂತಹ ಸಾರ್ವಜನಿಕ ವಲಯದ ಸಂಸ್ಥೆ (PSU) ಸಾಮಾಜಿಕವಾಗಿ ಅಗತ್ಯವಿರುವ ಆದರೆ ವಾಣಿಜ್ಯವಾಗಿ ಲಾಭದಾಯಕವಲ್ಲದ ಮಾರ್ಗಗಳಲ್ಲೂ ಸೇವೆ ನೀಡುತ್ತದೆ—ಖಾಸಗಿ, ಲಾಭಮುಖಿ ಸಂಸ್ಥೆಗಳು ಸಾಮಾನ್ಯವಾಗಿ ಇಂತಹ ಮಾರ್ಗಗಳನ್ನು ಕಡೆಗಣಿಸುತ್ತವೆ. ಬಿಎಂಟಿಸಿಯ ಗುರಿ ಎಲ್ಲರಿಗೂ ಸುರಕ್ಷಿತ ಸೇವೆ ಒದಗಿಸುವುದಾಗಿದೆ; ಕೇವಲ ವೇಗವಾಗಿ ಸಾಗಿಸುವುದಲ್ಲ. ಸಾರ್ವಜನಿಕ ವಲಯದ ಸಂಸ್ಥೆ ಪ್ರತಿಯೊಂದು ನಿಲ್ದಾಣ ಮತ್ತು ಪ್ರತಿಯೊಬ್ಬ ಪ್ರಯಾಣಿಕನಿಗೂ ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ—ಇದು ಸಂಪೂರ್ಣವಾಗಿ ಲಾಭಮುಖಿ ಖಾಸಗಿ ಮಾದರಿಯಲ್ಲಿ ಕಷ್ಟಸಾಧ್ಯ ಎಂದಿದ್ದಾರೆ.
ಸಾರ್ವಜನಿಕ ಸಾರಿಗೆ ಎಂದರೆ ಕೇವಲ ಪಿಎಸ್‌ಯುಗಳಿಗೆ ಮಾತ್ರ ಸೀಮಿತವಲ್ಲ; ನಮ್ಮ ಅಂತರ್ ನಗರ ಹಾಗೂ ಅಂತರ್ ರಾಜ್ಯ ಜಾಲವನ್ನು ಚಲಾಯಿಸುತ್ತಿರುವ ಖಾಸಗಿ ಸಾರಿಗೆ ಸಂಸ್ಥೆಗಳ ಪಾತ್ರವನ್ನು ನಾವು ಗೌರವಿಸುತ್ತೇವೆ. ಆದರೆ ನಮ್ಮ ಬೆಂಗಳೂರು ನಗರದ ಒಳನಾಡು ಸಾರಿಗೆಗೆ ಏಕೀಕೃತ ಸಾರ್ವಜನಿಕ ಮಾದರಿಯೇ ಅಗತ್ಯ. ಬಿಎಂಟಿಸಿ + ಮೆಟ್ರೋ ಒಳಗೊಂಡ ಬಲಿಷ್ಠ, ಏಕೀಕೃತ ವ್ಯವಸ್ಥೆ ನಿರ್ಮಿಸುವುದಕ್ಕೆ ನಾವು ಬದ್ಧರಾಗಿದ್ದೇವೆ—ಲಾಭದಾಯಕ ಮಾರ್ಗಗಳಿಗೆ ಮಾತ್ರವಲ್ಲ, ಎಲ್ಲಾ ಆರ್ಥಿಕ ವರ್ಗಗಳಿಗೂ ‘ಕೊನೆಯ ಮೈಲು’ ಸಂಪರ್ಕ ಒದಗಿಸುವುದು ನಮ್ಮ ಗುರಿ. ನಮ್ಮ ಹೊಣೆಗಾರಿಕೆ ಕೈಬಿಡುವುದಲ್ಲ, ಬದಲಾಗಿ ನಮ್ಮ ವಾಹನ ದಳವನ್ನು ಇನ್ನಷ್ಟು ಉತ್ತಮಗೊಳಿಸುವುದರ ಮೇಲೆ ನಾವು ಗಮನ ಹರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಚರ್ಚೆಗೆ ಆಹ್ವಾನ: ಈ ನಡುವೆ ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆ ಕುರಿತು ಏನಾದರೂ ಮಾಹಿತಿ ಹಂಚಿಕೊಳ್ಳುವುದಿದ್ದರೆ, ಎರಡು ದಿನಗಳ ಮುಂಚಿತವಾಗಿ ತಿಳಿಸಿ, ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಭೇಟಿಯಾಗಿ ನಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಬಹುದು. ನಿಮ್ಮಿಂದ ಬರುವ ರಚನಾತ್ಮಕ ಸಲಹೆಗಳನ್ನು ಸ್ವೀಕರಿಸಿ ಮತ್ತಷ್ಟು ಸುಧಾರಣೆ ತರಲು ನಾನು ಸದಾ ತೆರೆದಿದ್ದೇನೆ ಎಂದು ಆಹ್ವಾನ ನೀಡಿದ್ದಾರೆ.

