ಚಾಮರಾಜನಗರ/ರಾಯಚೂರು : ಚಾಮರಾಜನಗರ ಮತ್ತು ರಾಯಚೂರು ಜಿಲ್ಲಾಡಳಿತಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಆತಂಕವನ್ನುಂಟು ಮಾಡಿದೆ. ಚಾಮರಾಜನಗರ ಜಿಲ್ಲಾಡಳಿತ ಭವನವನ್ನು ಸ್ಫೋಟಿಸುವುದಾಗಿ ಮುಂಜಾನೆ 2.40ಕ್ಕೆ ಇ-ಮೇಲ್ ಸಂದೇಶ ಬಂದಿದೆ.
ತಮಿಳುನಾಡಿನ ಬಾಂಬ್ ಬ್ಲ್ಟ್‌ಾ ಪ್ರಕರಣಗಳನ್ನು ಉಲ್ಲೇಖಿಸಿ ಮೇಲ್ ಸಂದೇಶ ರವಾನೆ ಮಾಡಲಾಗಿದ್ದು, ಡಿಎಂಕೆ ನಾಯಕರ ಹೆಸರು ಉಲ್ಲೇಖಿಸಿದ್ದಾರೆ. ಮಧ್ಯಾಹ್ನ 3 ಗಂಟೆ ವೇಳೆಗೆ ಪೈಪ್‌ಗಳಲ್ಲಿ ಅಡಗಿಸಿಟ್ಟಿರುವ ಬಾಂಬ್ಗಳು ಸ್ಫೋಟಗೊಳಿಸುವುದಾಗಿ ಅಪರಿಚಿತ ಸಂದೇಶ ರವಾನೆ ಮಾಡಿದ್ದಾರೆ.
ಸಂದೇಶ ತಿಳಿಯುತ್ತಿದ್ದಂತೆ ಡಿಸಿ ಶಿಲ್ಪಾನಾಗ್ ಹಾಗೂ ಎಸ್ಪಿ ಡಾ.ಬಿ.ಟಿ.ಕವಿತಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಕಚೇರಿಯಲ್ಲಿದ್ದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹೊರಕ್ಕೆ ಕಳುಹಿಸಿ, ಜಿಲ್ಲಾಡಳಿತ ಭವನ ಆವರಣದೊಳಕ್ಕೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿದೆ. ಬಾಂಬ್ ಪತ್ತೆ ದಳ ಶೋಧ : ಬಾಂಬ್ ಪತ್ತೆ ದಳ ಮತ್ತು ಶ್ವಾನದಳವು ಜಿಲ್ಲಾಡಳಿತ ಭವನವನ್ನು ಜಾಲಾಡುತ್ತಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮರದ ಕೆಳಗೆ ಕುಳಿತು ಡಿಸಿ ಕೆಲಸ : ಬಾಂಬ್ ಪತ್ತೆ ದಳ ಶೋಧ ಕಾರ್ಯ ನಡೆಸುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಭವನ ಆವರಣದ ಮರದ ಕೆಳಗೆ ಕುಳಿತು ಡಿಸಿ ಶಿಲ್ಪಾನಾಗ್, ಎಡಿಸಿ ಗೀತಾ ಹುಡೇದಾ ಹಾಗೂ ಜಿಪಂ ಸಿಇಒ ಮೋನಾ ರೋತ್ ಕರ್ತವ್ಯ ನಿರ್ವಹಿಸಿದ್ದು, ಗಮನ ಸೆಳೆಯಿತು.
ಆತಂಕಪಡುವ ಅಗತ್ಯವಿಲ್ಲವೆಂದ ಡಿಸಿ : ಜಿಲ್ಲಾಡಳಿತ ಭವನವನ್ನು ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಯಾರೂ ಆತಂಕಪಡುವ ಅಗತ್ಯ ಇಲ್ಲ ಎಂದು ಡಿಸಿ ಶಿಲ್ಪಾನಾಗ್ ಹೇಳಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಂಬ್ ಇಟ್ಟಿರುವುದಾಗಿ ನಮಗೆ ಮೇಲ್ ಬಂದಿದೆ, ಸೆನ್ ಠಾಣೆಗೆ ದೂರು ನೀಡಿದ್ದೇವೆ.ರಾಜ್ಯ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ನೌಕರರನ್ನು ಹೊರಗೆ ಕಳಿಸಿದ್ದೇವೆ. ಜಿಲ್ಲಾಡಳಿತ ಭವನದಲ್ಲಿ ತಪಾಸಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲೂ ಆತಂಕ : ಗರದ ಹೊರವಲಯದ ಯಕ್ಲಾಸಪುರ ಗ್ರಾಮದ ಬಳಿ ಇರುವ ಹೊಸ ಜಿಲ್ಲಾಧಿಕಾರಿ ಕಚೇರಿಯ್ನ್ನು ಸ್ಫೋಟಗೊಳಿಸುವುದಾಗಿ ಬೆಳಿಗ್ಗೆ 6:30ರ ವೇಳೆಗೆ ರಾಯಚೂರು ಜಿಲ್ಲಾಧಿಕಾರಿಗಳ ಇ-ಮೇಲ್ ಐಡಿಗೆ ಸಂದೇಶ ಬಂದಿದೆ. ಮಧ್ಯಾಹ್ನ 3 ಗಂಟೆಗೆ ಪೈಪ್ನಲ್ಲಿ ಅಡಗಿಸಿಟ್ಟಿರುವ ಬಾಂಬ್ ಸ್ಪೋಟಗೊಳ್ಳಲಿದೆ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲಾ ಪೊಲೀಸ್ ಇಲಾಖೆಗೆ ಸೂಕ್ತ ಕ್ರಮಕ್ಕೆ ಪತ್ರ ಬರೆಯಲಾಗಿದೆ.
ಇ-ಮೇಲ್ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರುವವರಿಗೆ ಹಾಗೂ ವಿವಿಧ ಕೆಲಸಗಳಿಗೆ ಬಂದವರನ್ನು ಹೊರಗಡೆ ಕಳುಹಿಸಲಾಗಿದೆ. ಬಾಂಬ್ ನಿಷ್ಕ್ರಿಯ ಸಿಬ್ಬಂದಿ, ಪೊಲೀಸರು ಜಿಲ್ಲಾಧಿಕಾರಿ ಕಚೇರಿಯನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಿದ್ದಾರೆ.