ಅಪರಾಧ ಸುದ್ದಿ

Breaking news: Ajmer: ಹೋಟೆಲ್‌ನಲ್ಲಿ ಬೆಂಕಿ ಅವಘಡ. ಮಗು ಸೇರಿ ನಾಲ್ವರು ಸಜೀವ ದಹನ, ನಾಲ್ವರು ಗಂಭೀರ

Share It

ಜೈಪುರ :ರಾಜಸ್ಥಾನದ ಅಜ್ಮೀರ್‌ನ ಡಿಗ್ಗಿ ಬಜಾರ್ ಪ್ರದೇಶದ ಹೋಟೆಲ್‌ವೊಂದರಲ್ಲಿ ಗುರುವಾರ ಬೆಳಂಬೆಳಿಗ್ಗೆ ಭಾರಿ ಬೆಂಕಿ ಕಾಣಿಸಿಕೊಂಡು ನಾಲ್ವರು ಸಾವನ್ನಪ್ಪಿದ್ದಾರೆ. ಐದು ಅಂತಸ್ತಿನ ಹೋಟೆಲ್‌ನಲ್ಲಿ ತಂಗಿದ್ದ ಕೆಲವು ಅತಿಥಿಗಳು ಕಿಟಕಿಗಳಿಂದ ಹಾರಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಡಿಗ್ಗಿ ಬಜಾರ್ ಪ್ರದೇಶದ ಹೋಟೆಲ್ ವೊಂದರಲ್ಲಿ ಇಂದು ಬೆಳಗ್ಗೆ ಈ ಅವಘಡ ಸಂಭವಿಸಿದೆ. ಪೊಲೀಸ್ ತಂಡ ಸ್ಥಳದಲ್ಲಿದೆ. ಇದಕ್ಕಿದಂತೆ ಸಂಭವಿಸಿ ಬೆಂಕಿ ಅನಾಹುತದಲ್ಲಿ ಇಬ್ಬರು ಪುರುಷರು, ಒಬ್ಬ ಮಹಿಳೆ ಮತ್ತು ಮಗು ಸೇರಿದಂತೆ ನಾಲ್ವರು ಉಸಿರುಗಟ್ಟುವಿಕೆ ಮತ್ತು ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ” ಎಂದು ಜೆಎಲ್‌ಎನ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಅನಿಲ್ ಸಮರಿಯಾ ತಿಳಿಸಿದ್ದಾರೆ.

ಹೋಟೆಲ್‌ಗೆ ಕಿರಿದಾದ ಮಾರ್ಗವು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೆಚ್ಚುವರಿ ಎಸ್ಪಿ ಹಿಮಾಂಶು ಜಂಗಿದ್ ತಿಳಿಸಿದ್ದಾರೆ.

ಸ್ಫೋಟದ ಶಬ್ದ ಕೇಳಿದ ನಂತರ ತನ್ನ ಹೆಂಡತಿಯೊಂದಿಗೆ ಹೋಟೆಲ್ ನಿಂದ ಹೊರಗೆ ಓಡಿ ಹೊರಗೆ ಬಂದೆ. ಮಹಿಳೆಯೊಬ್ಬರು ಕಿಟಕಿಯಿಂದ ನನ್ನ ಮಡಿಲಲ್ಲಿ ತನ್ನ ಮಗುವನ್ನು ಎಸೆದರು. ಆಕೆ ಕಟ್ಟಡದಿಂದ ಜಿಗಿಯಲು ಪ್ರಯತ್ನಿಸಿದರು. ಆದರೆ ನಾವು ಆಕೆಯನ್ನು ತಡೆದೆವು ಎಂದು ಹೋಟೆಲ್‌ನಲ್ಲಿ ತಂಗಿದ್ದ ಮಂಗಿಲಾ ಕಲೋಸಿಯಾ ಘಟನೆ ಕುರಿತು ವಿವರಿಸಿದರು. ಒಬ್ಬ ವ್ಯಕ್ತಿಯು ಕಿಟಕಿಯಿಂದ ಜಿಗಿದು ತಲೆಗೆ ಗಾಯಗಳಾಗಿವೆ ಎಂದು ಅವರು ಹೇಳಿದರು.

ಕ್ಷಣಾ ಕಾರ್ಯಾಚರಣೆಗೆ ತೊಡಕು:

ಹೋಟೆಲ್‌ ಇರುವ ಪ್ರದೇಶಕ್ಕೆ ಕಿರಿದಾದ ರಸ್ತೆ ಇದ್ದು ಅಗ್ನಿ ಅವಘಡ ಸಂಭವಿಸಿದ ವೇಳೆ ಅಗ್ನಿಶಾಮಕ ವಾಹನ ಹೋಟೆಲ್ ಬಳಿ ತೆರಳಲು ಹರಸಾಹಸ ಪಡಬೇಕಾಯಿತು ಅಲ್ಲದೆ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯುಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ, ಐದು ಅಂತಸ್ತಿನ ಕಟ್ಟಡ ಆಗಿದ್ದರಿಂದ ಬೆಂಕಿ ಆವರಿಸಿಕೊಂಡ ಕೂಡಲೇ ಕಟ್ಟಡಕ್ಕೆ ಬೆಂಕಿ ಆವರಿಸಿದ್ದು ರಕ್ಷಣಾ ಕಾರ್ಯಕ್ಕೆ ತೊಡಕು ಉಂಟಾಗಿದೆ.

ಇನ್ನು ಘಟನೆ ಕುರಿತು ಅನುಭವ ಹಂಚಿಕೊಂಡ ಹೋಟೆಲ್ ನಲ್ಲಿ ತಂಗಿದ್ದ ವ್ಯಕ್ತಿ, ಬೆಳಗ್ಗೆ ಕಟ್ಟಡದಲ್ಲಿ ದೊಡ್ಡ ಸದ್ದು ಕೇಳಿದೆ ಇದಾದ ಬಳಿಕ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಇದನ್ನು ಕಂಡ ನಾನು ಮತ್ತು ಪತ್ನಿ ಕಟ್ಟಡದಿಂದ ಹೊರ ಓಡಿ ಬಂದಿದ್ದೇವೆ ಈ ವೇಳೆ ಕಟ್ಟಡದಲ್ಲಿ ಸಿಲುಕಿದ್ದ ಮಹಿಳೆ ತನ್ನ ಕೈಯಲ್ಲಿದ್ದ ಮಗುವನ್ನು ತಮ್ಮತ್ತ ಎಸೆದಿದ್ದಾರೆ ಬಳಿಕ ಮಹಿಳೆಯೂ ಕಟ್ಟಡದಿಂದ ಜಿಗಿಯಲು ಯತ್ನಿಸಿದ್ದಾರೆ ಆದರೆ ಅವರನ್ನು ನಾವು ತಡೆದೆವು ಬಳಿಕ ಬಂದ ರಕ್ಷಣಾ ಸಿಬ್ಬಂದಿ ಕಟ್ಟಡದಲ್ಲಿ ಸಿಲುಕಿದ್ದ ಮಂದಿಯನ್ನು ರಕ್ಷಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದಾರೆ.


Share It

You cannot copy content of this page