ಸುದ್ದಿ

ಕಾರವಾರ: ಕುಸಿದ ಕಾಳಿ ಸೇತುವೆ; ನೀರಿಗೆ ಬಿದ್ದೂ ಪ್ರಾಣಾಪಾಯದಿಂದ ಪಾರಾದ ಟ್ರಕ್ ಚಾಲಕ

Share It

ಕಾರವಾರ : ಭಾರಿ ಮಳೆ, ಗುಡ್ಡ ಕುಸಿತದಂತಹ ಅನಾಹುತಗಳ ನಡುವೆಯೇ ಕಾರವಾರದ ಕಾಳಿ ನದಿ ಸೇತುವೆ ಕುಸಿದುಬಿದ್ದಿದ್ದು, ಚಾಲಕನೊಬ್ಬ ಅಪಾಯದಿಂದ ಪಾರಾಗಿದ್ದಾನೆ.

ನಗರದ ಕೋಡಿಭಾಗದ ಬಳಿ ಕಾಳಿ ನದಿಯ ಸೇತುವೆ ಕುಸಿದು ಟ್ರಕ್ ವೊಂದು ಚಾಲಕನ ಸಮೇತ ನೀರಿಗೆ ಬಿದ್ದಿತ್ತು‌ ಈ ವೇಳೆ ಟ್ರಕ್ ಚಾಲಕ ಕ್ಯಾಬಿನ್ ಏರಿಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ. ಚಾಲಕನನ್ನು ಪೊಲೀಸರು ಹಾಗೂ ಮೀನುಗಾರರು ದೋಣಿ ಮೂಲಕ ತೆರಳಿ ರಕ್ಷಣೆ ಮಾಡಿದ್ದಾರೆ. ಲಾರಿ ಚಾಲಕ ಕೇರಳ ಮೂಲದ ರಾಧಾಕೃಷ್ಣ ನಾಳಾ ಸ್ವಾಮಿ (37) ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ದುರಂತದಲ್ಲಿ ಸೇತುವೆ ಕುಸಿದ ಬೆನ್ನಲ್ಲೆ ಟ್ರಕ್ ಕೂಡ ನದಿಗೆ ಬಿದ್ದಿದೆ. ಟ್ರಕ್ ಸಂಪೂರ್ಣ ಮುಳುಗಡೆಯಾಗಿದ್ದು, ಕ್ಯಾಬಿನ್ ಮಾತ್ರ ನೀರಿನಲ್ಲಿ ಕಾಣತೊಡಗಿತ್ತು. ಆಗ ಗಾಯಗೊಂಡಿದ್ದ ಚಾಲಕ ನೀರಿನಿಂದ ಹೊರಬಂದು ಟ್ರಕ್​ ಕ್ಯಾಬಿನ್ ಏರಿ ಸಹಾಯಕ್ಕಾಗಿ ಎದುರು ನೋಡುತ್ತಿದ್ದ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಮೀನುಗಾರರು ದೋಣಿಯನ್ನು ಕೊಂಡೊಯ್ದು, ಆತನನ್ನು ರಕ್ಷಣೆ ಮಾಡಿದ್ದಾರೆ. ದಡಕ್ಕೆ ಕರೆ ತಂದು ಕೂಡಲೇ ಕ್ರೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದ ಕೂಡಲೇ ಎಚ್ಚೆತ್ತ ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್, ಎಎಸ್‌ಪಿ ಜಯಕುಮಾರ ಹಾಗೂ ಡಿಎಸ್‌ಪಿ ಗಿರೀಶ್ ಸೇರಿ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿತು.

ಪೊಲೀಸರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಶಾಸಕ ಸತೀಶ್ ಸೈಲ್ ಕೂಡ ಮಧ್ಯರಾತ್ರಿಯಲ್ಲಿಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.15 ದಿನಗಳ ಹಿಂದಷ್ಟೆ ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿತ ಸಂಭವಿಸಿದ್ದು, ಅವೈಜ್ಞಾನಿಕ ಹೆದ್ದಾರಿ ರಸ್ತೆ ಕಾಮಗಾರಿ ಆರೋಪ ಕೇಳಿಬಂದಿತ್ತು. ಆ ಘಟನೆ ಮರೆಯುವ ಮುನ್ನವೇ ಇದೀಗ ಮತ್ತೊಂದು ಅವಘಡ ಸಂಭವಿಸಿದೆ.


Share It

You cannot copy content of this page