ಬಿಎಸ್‌ಪಿಗಷ್ಟೇ ಬೇಕಾದ ಮುಸ್ಲಿಂ ಅಭ್ಯರ್ಥಿಗಳು !

173
Share It

  • ಗುಜರಾತ್ ಚುನಾವಣೆ ಕಣದಲ್ಲಿ 35 ಮುಸ್ಲಿಂ ಅಭ್ಯರ್ಥಿಗಳು
  • ಬಿಜೆಪಿ, ಕಾಂಗ್ರೆಸ್ ಎರಡು ಪಕ್ಷದಿಂದ ಮುಸ್ಲಿಮರಿಗೆ ಟಿಕೆಟ್ ಇಲ್ಲ

ಅಹ್ಮದಾಬಾದ್: ಗುಜರಾತ್​ನ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ವಿವಿಧ ಪಕ್ಷಗಳ ಒಟ್ಟು 35 ಮುಸಲ್ಮಾನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಪ್ರತಿ ಬಾರಿ ಮುಸಲ್ಮಾನರಿಗೆ ಟಿಕೆಟ್​ ನೀಡುತ್ತಿದ್ದ ಕಾಂಗ್ರೆಸ್​ ಪಕ್ಷ ಈ ಬಾರಿ ಯಾವುದೇ ಲೋಕಸಭಾ ಕ್ಷೇತ್ರದಲ್ಲೂ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ಭರೂಚ್ ಲೋಕಸಭಾ ಕ್ಷೇತ್ರಕ್ಕೆ ಸಾಂಪ್ರದಾಯಿಕವಾಗಿ ಕಾಂಗ್ರೆಸ್​ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುತ್ತಿತ್ತು. ಆದರೆ ಇಂಡಿಯಾ ಮೈತ್ರಿಕೂಟದ ಭಾಗವಾಗಿ ಈ ಬಾರಿ ಭರೂಚ್ ಕ್ಷೇತ್ರವನ್ನು ಆಮ್ ಆದ್ಮಿ ಪಕ್ಷಕ್ಕೆ ಬಿಟ್ಟುಕೊಡಲಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

ರಾಷ್ಟ್ರೀಯ ಪಕ್ಷಗಳ ಪೈಕಿ ಬಹುಜನ ಸಮಾಜ ಪಕ್ಷ (ಬಿಎಸ್​ಪಿ) ಮಾತ್ರ ಗಾಂಧಿನಗರದಿಂದ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿದೆ. 2019ರ ಚುನಾವಣೆಯಲ್ಲಿ ಕೂಡ ಬಿಎಸ್​ಪಿ ಪಂಚಮಹಲ್​ನಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಗುಜರಾತ್​ನ 25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ 35 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2019ರಲ್ಲಿ 43 ಅಭ್ಯರ್ಥಿಗಳು ಕಣದಲ್ಲಿದ್ದರು.

ಮುಸ್ಲಿಂ ಸಮುದಾಯದ ಬಹುತೇಕ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ ಅಥವಾ ಕಡಿಮೆ ಪರಿಚಿತ ಪಕ್ಷಗಳಿಂದ ಕಣಕ್ಕಿಳಿಸಲ್ಪಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿದ ಗುಜರಾತ್ ಕಾಂಗ್ರೆಸ್​ನ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ವಜಿರ್ ಖಾನ್ ಪಠಾಣ್, “ಪಕ್ಷವು ಸಾಂಪ್ರದಾಯಿಕವಾಗಿ ಮುಸ್ಲಿಂ ಸಮುದಾಯದಿಂದ ಕನಿಷ್ಠ ಒಬ್ಬ ಅಭ್ಯರ್ಥಿಯನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುತ್ತಿತ್ತು. ಆದರೆ ಈ ಬಾರಿ ಭರೂಚ್ ಕ್ಷೇತ್ರವನ್ನು ಆಮ್ ಆದ್ಮಿ ಪಾರ್ಟಿಗೆ ಬಿಟ್ಟು ಕೊಟ್ಟಿರುವುದರಿಂದ ಅದು ಸಾಧ್ಯವಾಗಿಲ್ಲ” ಎಂದು ಮಾಹಿತಿ ನೀಡಿದರು.

“ಮುಸ್ಲಿಂ ಅಭ್ಯರ್ಥಿಗಳು ಬೇರೆ ಯಾವುದೇ ಕ್ಷೇತ್ರಗಳಿಂದ ಸ್ಪರ್ಧಿಸಿದರೂ ಗೆಲ್ಲುವ ಸಾಧ್ಯತೆಗಳು ಬಹಳ ಕಡಿಮೆ. ಅಹ್ಮದಾಬಾದ್ ಪಶ್ಚಿಮ ಮತ್ತು ಕಚ್ ಈ ಎರಡು ಕ್ಷೇತ್ರಗಳಲ್ಲಿ ಮುಸಲ್ಮಾನರ ಸಂಖ್ಯೆ ಜಾಸ್ತಿ ಇದ್ದರೂ ಇವೆರಡೂ ಕ್ಷೇತ್ರಗಳು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿವೆ” ಎಂದು ಪಠಾಣ್ ತಿಳಿಸಿದರು.

ಭರೂಚ್ ಹೊರತುಪಡಿಸಿ ಕಾಂಗ್ರೆಸ್ ಈ ಹಿಂದೆ ನವಸಾರಿ ಮತ್ತು ಅಹಮದಾಬಾದ್​ ನಿಂದ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. 1977ರಲ್ಲಿ ಕಾಂಗ್ರೆಸ್ ಅಹಮದಾಬಾದ್​ನಿಂದ ಎಹ್ಸಾನ್ ಜಾಫ್ರಿ ಮತ್ತು ಭರೂಚ್ ನಿಂದ ಅಹ್ಮದ್ ಪಟೇಲ್ ಹೀಗೆ ಇಬ್ಬರು ಮುಸ್ಲಿಂ ಸದಸ್ಯರನ್ನು ಲೋಕಸಭೆಗೆ ಕಳುಹಿಸಿತ್ತು.

ಪಟೇಲ್ ಅವರು 1980 ಮತ್ತು 1984 ರಲ್ಲಿ ಭರೂಚ್​ನಿಂದ ಮತ್ತೆ ಎರಡು ಬಾರಿ ಗೆದ್ದರು. ಅವರ ಮಗ ಫೈಸಲ್ ಪಟೇಲ್ ಮತ್ತು ಮಗಳು ಮುಮ್ತಾಜ್ ಪಟೇಲ್ ಈ ಬಾರಿ ಈ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದರೆ ಈ ಕ್ಷೇತ್ರ ಕೂಡ ಆಮ್ ಆದ್ಮಿ ಪಾರ್ಟಿಗೆ ಹಂಚಿಕೆಯಾಗಿದ್ದರಿಂದ ಇಬ್ಬರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಪ್ ಇಲ್ಲಿಂದ ಬುಡಕಟ್ಟು ನಾಯಕ ಚೈತಾರ್ ವಾಸವ ಅವರನ್ನು ಕಣಕ್ಕಿಳಿಸಿದೆ.

ಈ ಹಿಂದೆ 2004, 2009 ಮತ್ತು 2019 ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಕ್ರಮವಾಗಿ ಮುಹಮ್ಮದ್ ಪಟೇಲ್, ಅಜೀಜ್ ತಂಕರ್ವಿ ಮತ್ತು ಶೇರ್ ಖಾನ್ ಪಠಾಣ್ ಅವರನ್ನು ಭರೂಚ್​ನಿಂದ ಕಣಕ್ಕಿಳಿಸಿತ್ತು. 2014 ರ ಲೋಕಸಭಾ ಚುನಾವಣೆಯಲ್ಲಿ ಅದು ತನ್ನ ಏಕೈಕ ಮುಸ್ಲಿಂ ಅಭ್ಯರ್ಥಿ ಮಕ್ಸೂದ್ ಮಿರ್ಜಾ ಅವರನ್ನು ನವಸಾರಿ ಸ್ಥಾನದಿಂದ ಕಣಕ್ಕಿಳಿಸಿತ್ತು.

ಮಾಯಾವತಿ ನೇತೃತ್ವದ ಬಿಎಸ್​ಪಿ ಈ ಬಾರಿ ಗಾಂಧಿನಗರದಿಂದ ಸ್ಪರ್ಧಿಸಲು ಮೊಹಮ್ಮದ್ ಅನೀಸ್ ದೇಸಾಯಿ ಅವರಿಗೆ ಟಿಕೆಟ್ ನೀಡಿದೆ. ಇಲ್ಲಿ ಅವರು ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಗುಜರಾತ್​ನ 25 ಲೋಕಸಭಾ ಕ್ಷೇತ್ರಗಳ ಪೈಕಿ ಗಾಂಧಿನಗರದಲ್ಲಿ ಅತಿ ಹೆಚ್ಚು 8 ಮುಸ್ಲಿಂ ಅಭ್ಯರ್ಥಿಗಳಿದ್ದಾರೆ.

ಇದೇ ರೀತಿ ಮಹಾರಾಷ್ಟ್ರ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷ ಯಾವುದೇ ಲೋಕಸಭಾ ಕ್ಷೇತ್ರದಲ್ಲೂ ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೆಟ್ ನೀಡಿಲ್ಲ, ಹೀಗಾಗಿ ಮಹಾರಾಷ್ಟ್ರ ರಾಜ್ಯದ ಮುಸ್ಲಿಂ ಸಮುದಾಯದ ಮತದಾರರು ಮತ್ತು ನಾಯಕರು ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ನೀತಿಯನ್ನು ಖಂಡಿಸುತ್ತಿದ್ದಾರೆ.


Share It

You may have missed

You cannot copy content of this page