ರಾಜಕೀಯ ಸುದ್ದಿ

ತಮ್ಮ ಉತ್ತರಾಧಿಕಾರಿ ಘೋಷಣೆ ಮಾಡಿದ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ

Share It

ಲಖನೌ:ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ನೀರಸ ಪ್ರದರ್ಶನ ತೋರಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯ ದೃಷ್ಟಿಯಿಂದ ಪಕ್ಷದ ಅಧ್ಯಕ್ಷೆ ಮಾಯಾವತಿ ತಮ್ಮ ಉತ್ತರಾಧಿಕಾರಿಯ ಘೋಷಣೆ ಮಾಡಿದ್ದಾರೆ.

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಉತ್ತರಾಧಿಕಾರಿಯಾಗಿ ಘೋಷಿಸಿದ್ದಾರೆ. ಈ ಹಿಂದೆ ಕೂಡ ಅವರನ್ನು ಉತ್ತರಾಧಿಕಾರಿ ಎಂದು ಘೊಷಣೆ ಮಾಡಲಾಗಿತ್ತು, ಆದರೆ, ರಾಜಕೀಯ ಪ್ರಬುದ್ಧತೆ ಕೊರತೆಯಿಂದಾಗಿ ಹುದ್ದೆಯಿಂದ ತೆಗೆದುಹಾಕಲಾಗುತ್ತಿದೆ ಎಂದಿದ್ದರು.

ಇದೀಗ ಮಾಯಾವತಿ, ಆಕಾಶ್ ಆನಂದ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕರಾಗಿ ಮರು ನೇಮಕಗೊಳಿಸುವ ಜತೆಗೆ ರಾಜಕೀಯ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ. ಮೇನಲ್ಲಿ ಆನಂದ್ ಅವರನ್ನು ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ಮತ್ತು ಅವರ ಉತ್ತರಾಧಿಕಾರಿ ಹುದ್ದೆಯಿಂದ ತೆಗೆದುಹಾಕಿದ್ದರು.

ಲಕ್ನೋದಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಅವರನ್ನು ಮರಳಿ ರಾಷ್ಟ್ರೀಯ ಸಂಯೋಜಕ ಹುದ್ದೆಗೆ ನೇಮಕ ಮಾಡುವ ಮತ್ತು ತಮ್ಮ ಉತ್ತರಾಧಿಕಾರಿಯಾಗಿ ಮುಂದುವರಿಸುವ ನಿರ್ಧಾರವನ್ನು ಸರ್ವಸಮ್ಮತದಿಂದ ತೆಗೆದುಕೊಳ್ಳಲಾಯಿತು. 2019 ರಲ್ಲಿ 10 ಲೋಕಸಭಾ ಸ್ಥಾನಗಳನ್ನು ಪಡೆದಿದ್ದ ಬಿಎಸ್‌ಪಿ 2024 ರ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಸ್ಥಾನಗಳನ್ನು ಗೆಲ್ಲಲಿಲ್ಲ.

ಈ ಹಿಂದೆ ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಂಡಿದ್ದ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ 37 ಸ್ಥಾನ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಎಸ್‌ಪಿ ಉತ್ತರ ಪ್ರದೇಶದ 79 ಸೇರಿ ರಾಷ್ಟ್ರವ್ಯಾಪಿ 424 ಲೋಕಸಭಾ ಸ್ಥಾನಗಳಿಗೆ ಸ್ಪರ್ಧಿಸಿತ್ತು. ಆದರೆ, ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ.

ಇದೀಗ ಪಕ್ಷದ ಮರುಸಂಘಟನೆ ಗುರಿಯೊಂದಿಗೆ ಕೆಲ ಬದಲಾವಣೆ ಮಾಡಲಾಗುತ್ತಿದೆ. ಹೀಗಾಗಿ, ಆಕಾಶ್ ಆನಂದ್ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೊಷಿಸಿದ್ದಾರೆ. ಆಕಾಶ್ ಆನಂದ್, ಕಳೆದ ಚುನಾವಣೆಯಲ್ಲಿ ಉತ್ತರ ಪ್ರದೇಶದ ಸೀತಾಪುರ್ ಚುನಾವಣೆ ರ‍್ಯಾಲಿಯಲ್ಲಿ ಬಿಜೆಪಿ ಸರ್ಕಾರವನ್ನು “ಗದ್ದರೋನ್ ಕಿ ಸರ್ಕಾರ್” (ದೇಶದ್ರೋಹಿಗಳ ಸರ್ಕಾರ) ಎಂದು ಉಲ್ಲೇಖಿಸಿದ್ದರು. ಇದರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು.

ಸಮಾಜವಾದಿ ಪಕ್ಷದ ಜತೆಗೆ ಸಂಬಂಧ ಕಡಿದುಕೊಂಡ ನಂತರ 2019 ರಲ್ಲಿ ಆಕಾಶ್ ಆನಂದ್ ಅವರನ್ನು ರಾಷ್ಟ್ರೀಯ ಸಂಯೋಜಕರಾಗಿ ನೇಮಿಸಲಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ, ಮಾಯಾವತಿ ಅವರ ಉತ್ತರಾಧಿಕಾರಿ ಎಂದು ನೇಮಿಸಲಾಗಿತ್ತು. ಆದರೆ, ಮೇನಲ್ಲಿ ಮಾಯಾವತಿ ಅವರೇ ರಾಜಕೀಯ ಅಪ್ರಬುದ್ಧತೆ ಕಾರಣ ನೀಡಿ ಹುದ್ದೆಯಿಂದ ವಜಾಗೊಳಿಸಿದ್ದರು. ಇದೀಗ ಮರು ನೇಮಕ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.


Share It

You cannot copy content of this page