ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ನಿರಂತರ ಇ-ಖಾತಾ ಅಭಿಯಾನ
ಬೆಂಗಳೂರು: ಇ-ಖಾತಾ ಪಡೆಯುವುದು ಸಂಕಷ್ಟ ಎಂಬ ಸ್ಥಿತಿಗೆ ತಲುಪಿದ್ದ ನಗರದ ಜನತೆಯೀಗ ಸರಾಗವಾಗಿ ಇ-ಖಾತಾ ಪಡೆಯುವ ವ್ಯವಸ್ಥೆ ನಿರ್ಮಾಣವಾಗಿದ್ದು, ಬಿಟಿಎಂ ಲೇಔಟ್ ಶಾಸಕರೂ ಆದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಕಚೇರಿಯಲ್ಲಿ ಇ-ಖಾತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಈ ಹಿಂದೆ ಜುಲೈ 26ರವರೆಗೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಸಾರ್ವಜನಿಕರಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಇದೀಗ ನಿರಂತರವಾಗಿ ಇ-ಖಾತಾ ಅಭಿಯಾನ ನಡೆಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಲು ತೀರ್ಮಾನಿಸಲಾಗಿದೆ.
ಅಭಿಯಾನ ಜು 14 ರಿಂದ ಆರಂಭವಾಗಿದ್ದು, ಈವರೆಗೆ ಸಾವಿರಾರು ಮಾಲೀಕರು ಇ-ಖಾತಾವನ್ನು ಉಚಿತವಾಗಿ ಯಾವುದೇ ಅಡೆತಡೆಯಿಲ್ಲದೆ ಪಡೆದುಕೊಂಡಿದ್ದಾರೆ. ಖುದ್ದು ಸಚಿವ ರಾಮಲಿಂಗಾ ರೆಡ್ಡಿ ಅವರು ಕೆಲವು ಫಲಾನುಭವಿಗಳಿಗೆ ಇ-ಖಾತಾ ದೃಢೀಕರಣ ಪತ್ರಗಳನ್ನು ನೀಡುತ್ತಿದ್ದು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಕಂದಾಯ ಅಧಿಕಾರಿಗಳು ಹಾಗೂ ಶಾಸಕರ ಕಚೇರಿಯ ಸಿಬ್ಬಂದಿ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಾಜರಿದ್ದು, ಸಾರ್ವಜನಿಕರ ನೆರವಿಗೆ ನಿಂತು ಇ-ಖಾತಾ ಮಾಡಿಸಿಕೊಡುತ್ತಿದ್ದಾರೆ. ಸೂಕ್ತ ದಾಖಲಾತಿಗಳೊಂದಿಗೆ ಆಗಮಿಸುವ ಆಸ್ತಿ ಮಾಲೀಕರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಜತೆಗೆ ಅವರ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಖಾತಾ ಮಾಡಿಕೊಡಲಾಗುತ್ತಿದೆ.
ಜುಲೈ 26ರವರೆಗೆ ಇ-ಖಾತಾ ಅಭಿಯಾನ ನಡೆಯಲಿದ್ದು, ಆಸ್ತಿ ಮಾಲೀಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಇ-ಖಾತಾ ಪಡೆದುಕೊಳ್ಳಬಹುದು. ಖಾತೆದಾರರು ಅಗತ್ಯ ದಾಖಲೆಗಳಾದ ಸೇಲ್ ಡೀಡ್ ಪ್ರತಿ, ಖಾತಾ ಪ್ರತಿ, ಇತ್ತೀಚಿನ ವಿದ್ಯುತ್ ಬಿಲ್, ಇತ್ತೀಚಿನ ಬಿಬಿಎಂಪಿ ಟ್ಯಾಕ್ಸ್ ರಸೀದಿ, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಹಾಗೂ GPS ಲೋಕೇಷನ್ ಸಹಿತ ಕಟ್ಟಡದ ಭಾವಚಿತ್ರವನ್ನು ಜತೆಯಲ್ಲಿ ತರಬೇಕು.