ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣವು ರಾಜ್ಯ ಮಟ್ಟವನ್ನು ಮೀರಿ ರಾಷ್ಟ್ರಮಟ್ಟದಲ್ಲಿಯೂ ಗಂಭೀರ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ಹಿನ್ನಲೆ ಮತ್ತು ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡ (SIT) ತನಿಖೆಯನ್ನು ಚುರುಕುಗೊಳಿಸಿದ್ದು, ಇದೀಗ ತಂಡ ಕೇರಳದ ಕೊಚ್ಚಿಗೆ ತೆರಳಿದೆ.
ತನಿಖೆಯ ಭಾಗವಾಗಿ, ಎಸ್‌ಐಟಿ ಅಧಿಕಾರಿಗಳು ಕೇರಳದಲ್ಲಿ ಕಾನ್ಫಿಡೆಂಟ್ ಗ್ರೂಪ್‌ಗೆ ಸಂಬಂಧಿಸಿದ ಹಣಕಾಸು ವ್ಯವಹಾರಗಳು ಹಾಗೂ ವ್ಯವಹಾರ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಜೊತೆಗೆ, ಆದಾಯ ತೆರಿಗೆ ಇಲಾಖೆ ನಡೆಸಿದ ತಪಾಸಣೆಯ ನಂತರ ಸಿಜೆ ರಾಯ್ ಅವರ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ ಉಂಟಾಗಿತ್ತೇ ಎಂಬ ಪ್ರಶ್ನೆಯನ್ನೂ ತನಿಖೆಯ ಕೇಂದ್ರಬಿಂದುವಾಗಿಟ್ಟುಕೊಂಡಿದ್ದಾರೆ.
ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಆದಾಯ ತೆರಿಗೆ ಇಲಾಖೆಯ ದಾಳಿಯ ಬಳಿಕ ಸಿಜೆ ರಾಯ್ ಖಿನ್ನತೆಗೆ ಒಳಗಾಗಿದ್ದು, ಅವರು ಬೆಂಗಳೂರಿನ ಖ್ಯಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಸುಮಾರು ನಾಲ್ಕು ತಿಂಗಳಿಗೂ ಹೆಚ್ಚು ಅವಧಿಗೆ ಅವರು ಮಾನಸಿಕ ಆರೋಗ್ಯ ಸಂಬಂಧಿತ ಚಿಕಿತ್ಸೆಯಲ್ಲಿ ಇದ್ದರು ಎಂಬುದನ್ನು ಕುಟುಂಬ ಸದಸ್ಯರು ಎಸ್‌ಐಟಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಜಯನಗರ 8ನೇ ಬ್ಲಾಕ್‌ನಲ್ಲಿರುವ ಆಸ್ಪತ್ರೆಯಲ್ಲಿ ಅವರು ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಮಾಹಿತಿಯೂ ಹೊರಬಂದಿದೆ.
ಇದರ ಜೊತೆಗೆ, ಹೂಡಿಕೆದಾರರಿಂದ ಹೆಚ್ಚಿದ ಒತ್ತಡವೂ ರಾಯ್ ಮೇಲೆ ಪರಿಣಾಮ ಬೀರಿರಬಹುದೇ ಎಂಬ ಅಂಶವನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾನ್ಫಿಡೆಂಟ್ ಗ್ರೂಪ್‌ನ ಕೆಲವು ಯೋಜನೆಗಳು ನಿರೀಕ್ಷಿತ ಯಶಸ್ಸು ಕಾಣದ ಕಾರಣ, ಕೆಲ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಹಿಂದಿರುಗಿಸುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ರಾಯ್ ಗಂಭೀರ ಹಣಕಾಸಿನ ಒತ್ತಡ ಎದುರಿಸುತ್ತಿದ್ದರು ಎಂಬ ಅಂಶಗಳು ತನಿಖೆಯಲ್ಲಿ ಹೊರಬರುತ್ತಿವೆ.
ರಾಯ್ ಅವರು ಬ್ಯಾಂಕ್‌ಗಳಿಂದ ಸಾಲ ಪಡೆಯದೆ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ ಎಂದು ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದ್ದು, ಸಾಲವಿಲ್ಲದೆ ದೊಡ್ಡ ಮಟ್ಟದ ಯೋಜನೆಗಳಿಗೆ ಹಣವನ್ನು ಹೇಗೆ ವ್ಯವಸ್ಥೆ ಮಾಡಲಾಗಿತ್ತು ಎಂಬುದನ್ನೂ ಎಸ್‌ಐಟಿ ಪರಿಶೀಲಿಸುತ್ತಿದೆ. ಹಣಕಾಸಿನ ಮೂಲಗಳು ಮತ್ತು ವಹಿವಾಟುಗಳ ಸ್ವರೂಪವನ್ನು ತನಿಖೆಯ ಪ್ರಮುಖ ಭಾಗವನ್ನಾಗಿ ಮಾಡಲಾಗಿದೆ.
ಇನ್ನೊಂದೆಡೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರದಿಂದಲೂ ಹೆಚ್ಚಿನ ಗಮನ ಸೆಳೆಯಲಾಗಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಿಜೆ ರಾಯ್ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ. ಆದಾಯ ತೆರಿಗೆ ಇಲಾಖೆ ಕೇಂದ್ರ ಹಣಕಾಸು ಸಚಿವಾಲಯದ ವ್ಯಾಪ್ತಿಗೆ ಬರುವುದರಿಂದ, ಮುಂದಿನ ತನಿಖಾ ಕ್ರಮಗಳ ಬಗ್ಗೆ ಅಂತಿಮ ನಿರ್ಧಾರ ಕೇಂದ್ರ ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕದ ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
ಇದೇ ವೇಳೆ, ಸಿಜೆ ರಾಯ್ ಅವರ ವೈದ್ಯಕೀಯ ಹಿನ್ನೆಲೆ, ಚಿಕಿತ್ಸೆ ವಿವರಗಳು ಹಾಗೂ ಸಾವಿಗೆ ಮುನ್ನ ಅವರು ಸಂಪರ್ಕಿಸಿದ ವ್ಯಕ್ತಿಗಳ ಮಾಹಿತಿ ಕುರಿತು ಕೂಡ ಎಸ್‌ಐಟಿ ಸುದೀರ್ಘ ತನಿಖೆ ನಡೆಸಲಿದೆ. ಸಾವಿಗೆ ಮೊದಲು ಅವರು ಫೋನ್‌ನಲ್ಲಿ ಯಾರೊಂದಿಗೆ ಮಾತನಾಡಿದ್ದರು, ಯಾವ ವಿಷಯಗಳು ಚರ್ಚೆಯಾದವು ಎಂಬುದನ್ನು ಕರೆ ವಿವರಗಳ ಆಧಾರದಲ್ಲಿ ಪರಿಶೀಲಿಸಲಾಗುತ್ತಿದೆ. ರಾಯ್ ತಮ್ಮ ತಾಯಿಯೊಂದಿಗೆ ಮಾತನಾಡಲು ಪ್ರಯತ್ನಿಸಿದ್ದರು ಎಂಬ ಮಾಹಿತಿ ಈ ಹಿಂದೆ ಹೊರಬಂದಿದ್ದು, ಈ ಅಂಶವೂ ತನಿಖೆಯ ಭಾಗವಾಗಿದೆ.
ಸಿಜೆ ರಾಯ್ ಅವರ ಸಾವಿನ ಹಿನ್ನಲೆ ಅನೇಕ ಪ್ರಶ್ನೆಗಳನ್ನು ಎಬ್ಬಿಸಿದ್ದು, ಮುಂದಿನ ದಿನಗಳಲ್ಲಿ ಎಸ್‌ಐಟಿ ತನಿಖೆಯಿಂದ ಇನ್ನಷ್ಟು ಮಹತ್ವದ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆ ಇದೆ.

