ಅಪರಾಧ ಸುದ್ದಿ

400 ಮೀಟರ್ ಪ್ರಯಾಣಕ್ಕೆ 18 ಸಾವಿರ ರೂ ವಸೂಲಿ: ವಿದೇಶಿ ಪ್ರವಾಸಿ ಮಹಿಳೆಯ ದೂರಿನ ಬಳಿಕ ಕ್ಯಾಬ್ ಚಾಲಕನ ಬಂಧನ

Share It

ಮುಂಬೈ: ಹೊಸ ನಗರ, ಭಾಷಾ ಅಡೆತಡೆ, ಅನಪೇಕ್ಷಿತ ಪರಿಸ್ಥಿತಿ — ಇವೆಲ್ಲವೂ ಪ್ರಯಾಣಿಕರಿಗೆ ದೊಡ್ಡ ಸವಾಲಾಗುತ್ತವೆ. ಅದರಲ್ಲೂ ವಿದೇಶಿಗರಿಗೆ ಸಾರ್ವಜನಿಕ ಸಾರಿಗೆಯ ದುರುಪಯೋಗ ಹೆಚ್ಚಾಗಿ ಎದುರಾಗುತ್ತದೆ. ಇಂತಹದ್ದೇ ಒಂದು ಗಂಭೀರ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ವಿಮಾನ ನಿಲ್ದಾಣದಿಂದ ಕೇವಲ 400 ಮೀಟರ್ ದೂರದ ಹೋಟೆಲ್‌ಗೆ ತೆರಳಲು ಅಮೆರಿಕದ ಮಹಿಳೆಯೊಬ್ಬರಿಂದ ಕ್ಯಾಬ್ ಚಾಲಕ 18,000 ರೂಪಾಯಿ ವಸೂಲಿ ಮಾಡಿದ್ದಾನೆ ಎಂಬ ಆರೋಪದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಏರ್‌ಪೋರ್ಟ್‌ನಲ್ಲೇ ಆರಂಭವಾದ ಆತಂಕ: ಅಮೆರಿಕ ಮೂಲದ ಮಹಿಳೆ ವೈಯಕ್ತಿಕ ಕಾರಣಗಳಿಂದ ಮುಂಬೈಗೆ ಆಗಮಿಸಿದ್ದರು. ಮುಂಬೈ ವಿಮಾನ ನಿಲ್ದಾಣದ ಸಮೀಪದಲ್ಲೇ ಇರುವ ಹಿಲ್ಟನ್ ಹೋಟೆಲ್‌ನಲ್ಲಿ ಅವರು ಮೊದಲೇ ವಾಸ್ತವ್ಯ ಕಾಯ್ದಿರಿಸಿದ್ದರು. ಹೋಟೆಲ್‌ದೂರ ಕೇವಲ 400 ಮೀಟರ್ ಆಗಿದ್ದರೂ, ಪ್ರಯಾಣಕ್ಕಾಗಿ ಅವರು ಕ್ಯಾಬ್ ಬುಕ್ ಮಾಡಿಕೊಂಡಿದ್ದಾರೆ.

ಆದರೆ ಕ್ಯಾಬ್ ಬಂದಾಗ ಮಹಿಳೆಗೆ ಅನುಮಾನ ಶುರುವಾಯಿತು. ಚಾಲಕನೊಂದಿಗೆ ಮತ್ತೊಬ್ಬ ವ್ಯಕ್ತಿಯೂ ಕಾರಿನಲ್ಲಿ ಇದ್ದುದು ಅವರಿಗೆ ಆತಂಕ ತಂದಿತು. ಸಾಮಾನ್ಯವಾಗಿ ಕ್ಯಾಬ್‌ನಲ್ಲಿ ಒಬ್ಬನೇ ಚಾಲಕ ಇರುವುದರಿಂದ, ವಿದೇಶಿಯಾಗಿರುವ ಕಾರಣ ಅವರು ಕೆಲ ಹೊತ್ತು ಹಿಂಜರಿದರೂ ಕೊನೆಗೆ ಧೈರ್ಯ ಮಾಡಿ ಪ್ರಯಾಣ ಆರಂಭಿಸಿದ್ದಾರೆ.

ಹೋಟೆಲ್‌ಗೆ ಬದಲಾಗಿ ಅಪರಿಚಿತ ದಾರಿ: ಕ್ಯಾಬ್ ಚಾಲಕ ನೇರವಾಗಿ ಹೋಟೆಲ್‌ಗೆ ಕರೆದೊಯ್ಯದೆ, ಎರಡು ಬಾರಿ ಸುತ್ತು ಹಾಕಿ ನಂತರ ಅಪರಿಚಿತ ಪ್ರದೇಶಕ್ಕೆ ವಾಹನವನ್ನು ಕೊಂಡೊಯ್ದಿದ್ದಾನೆ ಎಂದು ಮಹಿಳೆ ದೂರಿದ್ದಾರೆ. ಅಲ್ಲಿ ಕಾರು ನಿಲ್ಲಿಸಿ, 18,000 ರೂಪಾಯಿ ಪಾವತಿಸಿದರೆ ಮಾತ್ರ ಹೋಟೆಲ್‌ಗೆ ಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಪರಿಸ್ಥಿತಿ ಗಂಭೀರವಾಗಿದ್ದರಿಂದ, ಬೇರೆ ದಾರಿ ಇಲ್ಲದೆ ಮಹಿಳೆ ಹಣ ಪಾವತಿಸಿದ್ದಾರೆ. ಬಳಿಕ ಚಾಲಕ ಕಾರನ್ನು ಹೋಟೆಲ್ ಸಮೀಪಕ್ಕೆ ತಂದು ನಿಲ್ಲಿಸಿ, ಒಳಗೆ ಪ್ರವೇಶಿಸದೇ ಅವರನ್ನು ಇಳಿಸಿ ಅಲ್ಲಿಂದ ತೆರಳಿದ್ದಾನೆ.

ಎಕ್ಸ್‌ನಲ್ಲಿ ಆಕ್ರೋಶ, ಪೊಲೀಸರಿಂದ ತಕ್ಷಣ ಕ್ರಮ: ಘಟನೆಯಿಂದ ಆಘಾತಗೊಂಡ ಮಹಿಳೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. “ಮುಂಬೈನಲ್ಲಿ ಲೂಟಿ ನಡೆಯುತ್ತಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಟ್ವೀಟ್ ಗಮನಿಸಿದ ಮುಂಬೈ ಪೊಲೀಸರು ತಕ್ಷಣವೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಕೆಲವೇ ಗಂಟೆಗಳಲ್ಲಿ ಆರೋಪಿತ ಕ್ಯಾಬ್ ಚಾಲಕನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಪ್ರವಾಸಿಗರ ಸುರಕ್ಷತೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕ ಸಾರಿಗೆಯ ಮೇಲಿನ ನಂಬಿಕೆಗೆ ಧಕ್ಕೆ ತಂದಿದೆ.


Share It

You cannot copy content of this page